ಬೆಳಗಾವಿ: ರಾಜ್ಯ ರಾಜಕಾರಣದ ಪ್ರಮುಖ ವಿದ್ಯಮಾನಗಳ ನಡುವೆ, ಬೆಳಗಾವಿ ಜಿಲ್ಲೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭೇಟಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಕುರಿತು ಮಾತನಾಡಿರುವ ಖಾನಾಪುರ ಕ್ಷೇತ್ರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್, “ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಬೆಳಗಾವಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಅವರ ಈ ಭೇಟಿಯಿಂದ ನಮ್ಮ ಜಿಲ್ಲೆಯಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎನ್ನುವ ಅಪಾರ ನಿರೀಕ್ಷೆ ನಮಗಿದೆ,” ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಜಿಲ್ಲೆಯ ಬೆನ್ನೆಲುಬಾಗಿರುವ ರೈತರ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ ಅವರು, ಪ್ರಸ್ತುತ ರೈತರು ಎದುರಿಸುತ್ತಿರುವ ನಾನಾ ತೊಂದರೆಗಳಿಗೆ ಹಾಗೂ ಜ್ವಲಂತ ಸಮಸ್ಯೆಗಳಿಗೆ ಈ ಭೇಟಿಯ ಸಂದರ್ಭದಲ್ಲಿ ಖಂಡಿತವಾಗಿಯೂ ಸೂಕ್ತ ಪರಿಹಾರ ಸಿಗಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಬಿಜೆಪಿ ಶಾಸಕರಿಂದ ಅಡ್ಡಮತದಾನ: ಕಾಂಗ್ರೆಸ್ ಕೆಲಸಕ್ಕೆ ಸಿಕ್ಕ ಮೆಚ್ಚುಗೆ!
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್ ಪರವಾಗಿ ಅಡ್ಡಮತದಾನ (Cross Voting) ಮಾಡಿರುವ ವಿಚಾರದ ಕುರಿತು ಅಂಜಲಿ ನಿಂಬಾಳ್ಕರ್ ಬಹಿರಂಗವಾಗಿ ಸಂತಸ ಹಂಚಿಕೊಂಡಿದ್ದಾರೆ. “ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸಗಳು ಮತ್ತು ಜನಪರ ಆಡಳಿತವನ್ನು ನೋಡಿ ಬಿಜೆಪಿ ಶಾಸಕರೇ ಈಗ ಕಾಂಗ್ರೆಸ್ ಪರವಾಗಿ ವೋಟಿಂಗ್ ಮಾಡುತ್ತಿದ್ದಾರೆ. ಇದು ನಮಗೆ ಅತ್ಯಂತ ಖುಷಿಯ ವಿಚಾರ,” ಎಂದು ಅವರು ಹೇಳಿದರು.
ಇದೇ ವೇಳೆ ಖಾನಾಪುರ ಬಿಜೆಪಿ ಶಾಸಕ ವಿಠ್ಠಲ ಹಲ್ಗೇಕರ್ ಅವರ ಹೆಸರು ಅಡ್ಡಮತದಾನದ ಪಟ್ಟಿಯಲ್ಲಿ ಕೇಳಿಬಂದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ನಿಂಬಾಳ್ಕರ್, “ಕಾಂಗ್ರೆಸ್ ಪರವಾಗಿ ಮತದಾನ ಮಾಡಿದ ಅವರಿಗೆ ನಾನು ಧನ್ಯವಾದಗಳನ್ನು ಹೇಳಬಯಸುತ್ತೇನೆ,” ಎಂದರು.
ನನ್ನ ಸೋಲಿಗೆ ನಮ್ಮವರೇ ಕಾರಣ? ಗುಟ್ಟು ಬಿಟ್ಟುಕೊಡದ ಮಾಜಿ ಶಾಸಕಿ!
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಖಾನಾಪುರ ಕ್ಷೇತ್ರದಲ್ಲಿ ತಮಗಾದ ಸೋಲಿನ ಕುರಿತು ಅಂಜಲಿ ನಿಂಬಾಳ್ಕರ್ ಇದೇ ಮೊದಲ ಬಾರಿಗೆ ಮಾರ್ಮಿಕವಾಗಿ ಮಾತನಾಡಿದ್ದಾರೆ. “ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಜನ ನನಗೆ ಸಹಕಾರ ನೀಡಿದ್ದಾರೆ ಎಂದು ಸ್ವತಃ ವಿಠ್ಠಲ ಹಲ್ಗೇಕರ್ ಅವರೇ ಹೇಳಿಕೊಂಡಿದ್ದಾರೆ. ಹಾಗಾದರೆ ಕಾಂಗ್ರೆಸ್‌ನ ಯಾವ ನಾಯಕರು ಅವರಿಗೆ ಸಪೋರ್ಟ್ ಮಾಡಿದ್ದರು ಎಂಬುದನ್ನು ಸ್ವತಃ ವಿಠ್ಠಲ ಹಲ್ಗೇಕರ್ ಅವರನ್ನೇ ಕೇಳಿ ತಿಳಿದುಕೊಳ್ಳಬೇಕು,” ಎಂದು ಮಾರ್ಮಿಕವಾಗಿ ನುಡಿದರು.
ನನ್ನ ಸೋಲಿಗೆ ಕಾರಣ ಯಾರು ಅಂತಾ ಹುಡುಕಬೇಕಿದೆ. ನಮ್ಮ ಪಕ್ಷದವರೇ ಅದರಲ್ಲಿ ಇದ್ದಾರೆ. ಆದರೆ, ನನ್ನನ್ನು ಸೋಲಿಸಲು ಅವರಿಗೆ ಇದ್ದ ನಿಖರವಾದ ಕಾರಣ ಏನೆಂಬುದು ಮಾತ್ರ ಇನ್ನು ನಿಗೂಢವಾಗಿದೆ.
ಡಾ. ಅಂಜಲಿ ನಿಂಬಾಳ್ಕರ್, ಮಾಜಿ ಶಾಸಕಿ.
ಅಂಜಲಿ ನಿಂಬಾಳ್ಕರ್ ಅವರ ಈ ಹೇಳಿಕೆಗಳು ಈಗ ಬೆಳಗಾವಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ವಲಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲಾ ರಾಜಕಾರಣದಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

