ಬೆಳಗಾವಿ: ಹೆತ್ತ ಕರುಳನ್ನೇ ಕಸದ ತೊಟ್ಟಿಗೆ ಎಸೆಯುವ ಕಲಿಯುಗದ ಕ್ರೂರ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದ್ದು, ನವಜಾತ ಗಂಡು ಶಿಶುವನ್ನು ಬ್ರಿಡ್ಜ್ ಕೆಳಗೆ ಎಸೆದು ಹೋದ ಅಮಾನವೀಯ ಕೃತ್ಯವೊಂದು ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿತ್ತೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಲ್ಲು ಹೃದಯದ ತಾಯಿಯೊಬ್ಬಳು ತಾನು ಹೆತ್ತ ಮಗುವನ್ನು ರಸ್ತೆಯ ಪಕ್ಕದ ಕಸದಲ್ಲಿ ಎಸೆದು ಪರಾರಿಯಾಗಿದ್ದಾಳೆ.
ಕುರಿಗಾಯಿಗಳ ಸಮಯಪ್ರಜ್ಞೆ: ಮಗುವಿಗೆ ಮರುಜನ್ಮ
ಕಿತ್ತೂರು-ನರಗುಂದ ರಸ್ತೆಯ ಬಸವಣಕಟ್ಟಿ ಬ್ರಿಡ್ಜ್ ಕೆಳಗಡೆ ಈ ನವಜಾತ ಶಿಶುವನ್ನು ಎಸೆಯಲಾಗಿತ್ತು. ಬಿಡುಗಣ್ಣಿನಿಂದ ಅಳುತ್ತಿದ್ದ ಮಗುವಿನ ರೋದನೆ ಆ ಕಡೆಯಾಗಿ ಸಾಗುತ್ತಿದ್ದ ಕುರಿಗಾಯಿಗಳ ಕಿವಿಗೆ ಬಿದ್ದಿದೆ. ಕೂಡಲೇ ಸದ್ದು ಬಂದ ಕಡೆಗೆ ಧಾವಿಸಿದ ಕುರಿಗಾಯಿಗಳು, ಕಸದ ರಾಶಿಯಲ್ಲಿ ಬಿದ್ದಿದ್ದ ಮುದ್ದಾದ ಗಂಡು ಮಗುವನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ. ತಡಮಾಡದೇ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿ, ಮಾನವೀಯತೆ ಮೆರೆದಿದ್ದಾರೆ.
ಆಸ್ಪತ್ರೆಗೆ ದಾಖಲು
ರಕ್ಷಿಸಲ್ಪಟ್ಟ ಹಸುಳೆಯನ್ನು ತಕ್ಷಣವೇ ಚಿಕಿತ್ಸೆಗಾಗಿ ಸವದತ್ತಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಮಗುವಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದು, ಮಗು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಪೊಲೀಸರ ಭೇಟಿ, ತನಿಖೆ ಮುಂದುವರಿಕೆ
ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸುರೇಬಾನ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರೇಬಾನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಮಗುವನ್ನು ತಂದು ಎಸೆದ ದುರುಳ ತಾಯಿ ಯಾರು? ಈ ಕೃತ್ಯದ ಹಿಂದಿನ ಕಾರಣವೇನು? ಎಂಬುದರ ಕುರಿತು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಹೆತ್ತ ಮಗುವನ್ನೇ ಈ ರೀತಿ ಕಸದಂತೆ ಎಸೆದು ಹೋದ ತಾಯಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಮಗುವನ್ನು ರಕ್ಷಿಸಿದ ಕುರಿಗಾಯಿಗಳ ಸಮಯಪ್ರಜ್ಞೆಗೆ ಜನರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.


