ಬಾಗಲಕೋಟೆ/ಬೆಳಗಾವಿ: ರೈಲು ಅಪಘಾತದಲ್ಲಿ ಸಿಲುಕಿ ತಲೆಗೆ ತೀವ್ರ ಪೆಟ್ಟಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯೊಬ್ಬರ ಅಂಗಾಂಗಗಳನ್ನು ದಾನ ಮಾಡಲು ಅವರ ಕುಟುಂಬಸ್ಥರು ಒಪ್ಪಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬಾಗಲಕೋಟೆಯ ಆಸ್ಪತ್ರೆಯಿಂದ ಬೆಳಗಾವಿಯ ಜೆ.ಎನ್.ಎಂ.ಸಿ ಆಸ್ಪತ್ರೆಗೆ ರೋಗಿಯನ್ನು ತಲುಪಿಸಲು ಪೊಲೀಸರು ‘ಗ್ರೀನ್ ಕಾರಿಡಾರ್’ ‘ಜೀರೋ ಟ್ರಾಫಿಕ್’ ವ್ಯವಸ್ಥೆ ಮಾಡುವ ಮೂಲಕ ಸಕಾಲದಲ್ಲಿ ಅಂಗಾಂಗ ದಾನ ಪ್ರಕ್ರಿಯೆ ಯಶಸ್ವಿಯಾಗಲು ನೆರವಾಗಿದ್ದಾರೆ.

ಧಾರವಾಡದ ರೈಲ್ವೆ ನಿಲ್ದಾಣದಲ್ಲಿ 55 ವರ್ಷದ ದುಂಡಪ್ಪ ಎಂಬುವವರು ರೈಲು ಹತ್ತುವ ಭರದಲ್ಲಿ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದರು. ಈ ವೇಳೆ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ಕರೆತರಲಾಯಿತು. ವೈದ್ಯರ ತಂಡ ರೋಗಿಯನ್ನು ಬದುಕಿಸಲು ಸಕಲ ಪ್ರಯತ್ನ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ‘ಬ್ರೈನ್ ಡೆಡ್’ (ಮೆದುಳು ನಿಷ್ಕ್ರಿಯ) ಆಗಿರುವುದಾಗಿ ವೈದ್ಯರು ಪ್ರಕಟಿಸಿದರು.
ಮನೆಯ ಯಜಮಾನ ಇನ್ನು ಬದುಕುವುದಿಲ್ಲ ಎಂಬ ಕಹಿ ಸತ್ಯ ತಿಳಿದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಆದರೆ, ಇಂತಹ ತೀವ್ರ ದುಃಖದ ನಡುವೆಯೂ ಧೈರ್ಯ ತಂದುಕೊಂಡ ದುಂಡಪ್ಪ ಅವರ ಕುಟುಂಬದವರು, ತಮ್ಮವರ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದರು. ತಮ್ಮ ಮನೆಯವರು ಲೋಕ ಬಿಟ್ಟು ಹೋದರೂ ಅವರ ಅಂಗಾಂಗಗಳ ಮೂಲಕ ಮತ್ತೊಂದಿಷ್ಟು ಜನರಿಗೆ ಮರುಜೀವ ಸಿಗಲಿ ಎಂಬ ಅವರ ಈ ನಿರ್ಧಾರ ಇಡೀ ಸಮಾಜಕ್ಕೆ ಮಾದರಿಯಾಗಿದೆ.

ಅಂಗಾಂಗ ದಾನದ ಶಸ್ತ್ರಚಿಕಿತ್ಸೆಗಾಗಿ ರೋಗಿಯನ್ನು ಬಾಗಲಕೋಟೆಯಿಂದ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಶಿಫ್ಟ್ ಮಾಡಲು ತೀರ್ಮಾನಿಸಲಾಯಿತು. ಬ್ರೈನ್ ಡೆಡ್ ಆದ ರೋಗಿಯ ಹೃದಯ ಬಡಿತ ಮತ್ತು ರಕ್ತದ ಒತ್ತಡವನ್ನು (ಬಿಪಿ) ನಾರ್ಮಲ್ ಆಗಿ ಇಟ್ಟುಕೊಂಡೇ ಆಸ್ಪತ್ರೆಗೆ ತಲುಪಿಸಬೇಕಾದ ದೊಡ್ಡ ಸವಾಲು ವೈದ್ಯರ ಮುಂದಿತ್ತು.
ವಿಷಯ ತಿಳಿಯುತ್ತಿದ್ದಂತೆಯೇ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣ ಅಲರ್ಟ್ ಆದರು. ಎರಡೂ ಜಿಲ್ಲೆಗಳ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆಗೆ ಇಳಿದು, ಆಂಬ್ಯುಲೆನ್ಸ್ ಚಲಿಸುವ ದಾರಿಯುದ್ದಕ್ಕೂ ಬೇರೆ ಯಾವುದೇ ವಾಹನಗಳು ಬಾರದಂತೆ ‘ಜೀರೋ ಟ್ರಾಫಿಕ್’ ವ್ಯವಸ್ಥೆ ಮಾಡಿಕೊಟ್ಟರು. ಪೊಲೀಸರ ಅಚ್ಚುಕಟ್ಟು ವ್ಯವಸ್ಥೆ ಹಾಗೂ ಆಸ್ಪತ್ರೆಯ ಸಿಬ್ಬಂದಿಯ ಜಾಗರೂಕತೆಯಿಂದಾಗಿ, ರೋಗಿಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಸುರಕ್ಷಿತವಾಗಿ ಬೆಳಗಾವಿಯ ಆಸ್ಪತ್ರೆಗೆ ತಲುಪಿಸಲಾಯಿತು.
ರೋಗಿಯ ಸ್ಥಿತಿ ಗಂಭೀರವಾಗಿದ್ದರೂ ಅವರ ಬಿಪಿ ಮತ್ತು ಹಾರ್ಟ್ ಬೀಟ್ ಸರಿಯಾಗಿ ಇರುವಂತೆ ನೋಡಿಕೊಂಡು ಸುರಕ್ಷಿತವಾಗಿ ಬೆಳಗಾವಿಗೆ ತರಲಾಗಿದೆ. ಇದಕ್ಕೆ ಸಹಕರಿಸಿದ ಆಸ್ಪತ್ರೆಯ ಸಿಬ್ಬಂದಿ, ಉಭಯ ಜಿಲ್ಲೆಗಳ ಎಸ್ಪಿಗಳು ಹಾಗೂ ಇಡೀ ಪೊಲೀಸ್ ಇಲಾಖೆಗೆ ನಮ್ಮ ಧನ್ಯವಾದಗಳು ಎಂದು ವೈದ್ಯಕೀಯ ತಂಡದ ಡಾ. ನಾಗರಾಜ್ ತಿಳಿಸಿದ್ದಾರೆ. ಸದ್ಯ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಬೇರೆ ರೋಗಿಗಳಿಗೆ ಅಂಗಾಂಗ ಜೋಡಣೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ.

