ಬೆಳಗಾವಿ: ಕರ್ನಾಟಕ ಸರ್ಕಾರದ ಅತ್ಯಂತ ಜನಪ್ರಿಯ ‘ಗೃಹಲಕ್ಷ್ಮಿ’ ಯೋಜನೆ ಇಂದು ಇಡೀ ದೇಶಕ್ಕೇ ಮಾದರಿಯಾಗಿದ್ದು, ವಿಪಕ್ಷಗಳ ಟೀಕೆಗಳ ನಡುವೆಯೂ ಕೇಂದ್ರದ ಆಯೋಗವೇ ಈ ಯೋಜನೆಗೆ ಭೇಷ್ ಎಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣದ ಪ್ರಚಲಿತ ವಿದ್ಯಮಾನಗಳು, ಬೆಳಗಾವಿ ಜಿಲ್ಲೆಯ ಸಚಿವ ಸ್ಥಾನದ ಬೇಡಿಕೆ ಹಾಗೂ ವಿರೋಧ ಪಕ್ಷಗಳ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಕೇಂದ್ರ ಆಯೋಗದಿಂದಲೇ ಪ್ರಶಂಸೆ: ಬೇರೆ ರಾಜ್ಯಗಳಿಂದ ಕಾಪಿ
“ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಾಗ ಬಿಜೆಪಿ ನಾಯಕರು ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದರು. ಇದರಲ್ಲಿ ಬರೋಬ್ಬರಿ 5,000 ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಅಪಪ್ರಚಾರ ಮಾಡಿದ್ದರು. ಆದರೆ ಇಂದು ಕೇಂದ್ರದ ಉನ್ನತ ಆಯೋಗವೇ ಗೃಹಲಕ್ಷ್ಮಿ ಯೋಜನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದೆ. ಮಹಿಳೆಯರ ಆರ್ಥಿಕ ಸ್ವಾಭಿಮಾನ ಹಾಗೂ ಸ್ವಾವಲಂಬನೆಗೆ ಈ ಯೋಜನೆ ದೊಡ್ಡ ಕೊಡುಗೆ ನೀಡಿದೆ ಎಂದು ಬಣ್ಣಿಸಿದೆ. ಇಂದು ಕೇಂದ್ರದ ಎನ್‌ಡಿಎ ಒಕ್ಕೂಟದ ಸರ್ಕಾರಗಳು ಸೇರಿದಂತೆ ಬೇರೆ ರಾಜ್ಯಗಳು ನಮ್ಮದೇ ಮಾದರಿಯನ್ನು ನಕಲು (ಕಾಪಿ) ಮಾಡುತ್ತಿವೆ” ಎಂದು ಹೆಬ್ಬಾಳ್ಕರ್ ತಿರುಗೇಟು ನೀಡಿದರು.
ಬೆಳಗಾವಿಗೆ ಕನಿಷ್ಠ 2 ಮಂತ್ರಿ ಸ್ಥಾನದ ವಿಶ್ವಾಸ
ಜಿಲ್ಲೆಗೆ ಹೆಚ್ಚುವರಿ ಸಚಿವ ಸ್ಥಾನ ನೀಡಬೇಕೆಂಬ ಚರ್ಚೆಯ ಕುರಿತು ಮಾತನಾಡಿದ ಅವರು, “ಬೆಳಗಾವಿ ರಾಜ್ಯದಲ್ಲೇ ಅತ್ಯಂತ ದೊಡ್ಡ ಜಿಲ್ಲೆಗಳಲ್ಲೊಂದು. ಕಳೆದ ಚುನಾವಣೆಯಲ್ಲಿ ಇಲ್ಲಿಂದ 11 ಜನ ಕಾಂಗ್ರೆಸ್ ಶಾಸಕರು ಗೆದ್ದು ಬಂದಿದ್ದಾರೆ. ಜಿಲ್ಲೆಯ ಗಾತ್ರ ಮತ್ತು ಪಕ್ಷದ ಬಲವನ್ನು ಪರಿಗಣಿಸಿ, ಕನಿಷ್ಠ ಇನ್ನೂ ಎರಡು ಮಂತ್ರಿ ಸ್ಥಾನಗಳನ್ನು ನೀಡಬೇಕು ಎನ್ನುವ ವಿಶ್ವಾಸ ನಮಗಿದೆ” ಎಂದರು. ಇದೇ ವೇಳೆ, ಮುಂಬರುವ ಸಂಪುಟ ಬದಲಾವಣೆಯಲ್ಲಿ ತಮಗೆ ಪ್ರಮುಖ ಅವಕಾಶ ಸಿಗಲಿದೆಯೇ ಎಂಬ ಪ್ರಶ್ನೆಗೆ, “ಅದನ್ನು ನೀವೇ ಮುಖ್ಯಮಂತ್ರಿಗಳನ್ನು ಕೇಳಬೇಕು” ಎಂದು ನಗುತ್ತಲೇ ಉತ್ತರಿಸಿದರು.
ಯಡಿಯೂರಪ್ಪ ಒಬ್ಬಂಟಿಯಾಗಿ ಸಿಎಂ ಆಗಿರಲಿಲ್ಲವೇ?
ರಾಜ್ಯ ಸರ್ಕಾರದ ಕಾರ್ಯವೈಖರಿ ಕುರಿತ ಬಿಜೆಪಿಯ ಆರೋಪಗಳಿಗೆ ಉತ್ತರಿಸಿದ ಸಚಿವರು, “ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಎಷ್ಟು ದಿನಗಳ ಕಾಲ ಒಬ್ಬಂಟಿಯಾಗಿಯೇ ಸರ್ಕಾರ ನಡೆಸಿದ್ದರು ಎಂಬುದು ಬಿಜೆಪಿಯವರಿಗೆ ನೆನಪಿಲ್ಲವೇ? ನಮ್ಮ ಸರ್ಕಾರದಲ್ಲಿ ಸದ್ಯ 13 ಜನ ಸಚಿವರುಗಳು ನಿರಂತರವಾಗಿ ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ನೆನಪಿಸಿದರು.
“ನಮ್ಮ ನಾಯಕರು ಆರು ವರ್ಷಗಳ ಕಾಲ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿರುವುದರಿಂದ ಉತ್ತರ ಕರ್ನಾಟಕದ ಪ್ರತಿಯೊಂದು ಸಮಸ್ಯೆಗಳೂ ಅವರಿಗೆ ಗೊತ್ತಿವೆ. ಪ್ರಾದೇಶಿಕ ಅಗತ್ಯತೆಗಳಿಗೆ ಅನುಗುಣವಾಗಿ ಸಮಗ್ರ ಅಭಿವೃದ್ಧಿ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಅವರು ಸ್ಪಷ್ಟಪಡಿಸಿದರು.


