ಕಾಂಗ್ರೆಸ್‌ನಲ್ಲಿ ಕಾಯುವುದು ಬಹಳ ಮುಖ್ಯ, ನಮಗೂ ಅವಕಾಶ ಸಿಗಲಿದೆ: ಸಚಿವ ಸತೀಶ್ ಜಾರಕಿಹೊಳಿ ಧೀಮಂತ ನಡೆ

Letest Post ರಾಜಕೀಯ

ಬೆಳಗಾವಿ: “ಕಾಂಗ್ರೆಸ್ ಪಕ್ಷದಲ್ಲಿ ತಾಳ್ಮೆಯಿಂದ ಕಾಯುವುದು ಅತ್ಯಂತ ಪ್ರಮುಖವಾಗಿದೆ. ಜಿ. ಪರಮೇಶ್ವರ್ ಅವರಿಗೆ 13 ವರ್ಷಗಳ ಬಳಿಕ ಡಿಸಿಎಂ ಹುದ್ದೆ ಸಿಕ್ಕಿದೆ. ನಾವೂ ಕಾಯಬೇಕು, ನಮಗೂ ಮುಂದಿನ ದಿನಗಳಲ್ಲಿ ಖಂಡಿತ ಅವಕಾಶ ಸಿಗಲಿದೆ” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಹುದ್ದೆ, ಪಕ್ಷದಲ್ಲಿನ ಆಂತರಿಕ ವಿದ್ಯಮಾನಗಳು, ಅಹಿಂದ ರಾಜಕಾರಣ ಹಾಗೂ ತಮ್ಮ ವಿರುದ್ಧ ನಡೆಯುತ್ತಿರುವ ಪಿತೂರಿಗಳ ಕುರಿತು ಮುಕ್ತವಾಗಿ ಮನಸ್ಸು ಬಿಚ್ಚಿ ಮಾತನಾಡಿದರು.

ಪಕ್ಷ ನನಗೆ ಸೂಕ್ತ ಗೌರವ ನೀಡಿದೆ:

‘ಡಿಕೆಶಿ ಸರ್ಕಾರದಲ್ಲಿ ನಿಮಗೆ ಅನ್ಯಾಯವಾಗಿದೆಯೇ?’ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಪಕ್ಷದಲ್ಲಿ ಹಂತ ಹಂತವಾಗಿ ಹುದ್ದೆಗಳನ್ನು ನೀಡಲಾಗುತ್ತದೆ. ಹೈಕಮಾಂಡ್ ನಮಗೆ ಎಷ್ಟು ಪ್ರಾಮುಖ್ಯತೆ ನೀಡಬೇಕೋ ಅಷ್ಟನ್ನು ನೀಡುತ್ತಿದೆ. ಹೆಚ್ಚಿನ ಜವಾಬ್ದಾರಿಯ ಬಗ್ಗೆ ಮುಂದಿನ ದಿನಗಳಲ್ಲಿ ನಿರೀಕ್ಷೆ ಮಾಡೋಣ. ಸರ್ಕಾರ ರಚನೆಯಾದಾಗ ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಟಾಪ್ 5 ರಲ್ಲಿದ್ದರೆ, ಈಗಲೂ ಟಾಪ್ 6 ರಲ್ಲಿದೆ. ಕಾಂಗ್ರೆಸ್ ನನಗೆ ನೀಡಬೇಕಾದ ಗೌರವವನ್ನು ನೀಡಿದೆ. ಬೇರೆಯವರಿಗೆ ಅತಿ ಹೆಚ್ಚು ನಿರೀಕ್ಷೆಗಳಿರುವುದು ಸಹಜ” ಎಂದರು.

ನನ್ನ ವಿರುದ್ಧ ಪಿತೂರಿ ನಡೆದಿರುವುದು ನಿಜ:

‘ನಿಮಗೆ ಬೆನ್ನಿಗೆ ಚೂರಿ ಹಾಕಿದ್ದು ಯಾರು?’ ಎಂಬ ನೇರ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, “ನನಗೆ ಯಾರೂ ಬೆನ್ನಿಗೆ ಚೂರಿ ಹಾಕಿಲ್ಲ. ಆದರೆ ನನ್ನ ವಿರುದ್ಧ ಪಿತೂರಿ ನಡೆಸಿರುವುದು ಮಾತ್ರ ನೂರಕ್ಕೆ ನೂರು ನಿಜ. ಆ ಪ್ರಕರಣದ ತನಿಖೆಯನ್ನು ಸದ್ಯ ಪೊಲೀಸರು ನಡೆಸುತ್ತಿದ್ದಾರೆ. ತನಿಖೆ ಮುಗಿದ ಬಳಿಕ ಆ ವ್ಯಕ್ತಿಗಳು ಯಾರು ಎಂಬುದು ಜಗತ್ತಿಗೆ ಗೊತ್ತಾಗಲಿದೆ. ಅವಕಾಶ ಸಿಕ್ಕಾಗಲೆಲ್ಲ ನಮ್ಮ ವಿರುದ್ಧ ಅಪ್ರಚಾರ ಮಾಡುವವರು ಇದ್ದೇ ಇರುತ್ತಾರೆ” ಎಂದು ಮಾರ್ಮಿಕವಾಗಿ ನುಡಿದರು.

ಅಹಿಂದ ನಾಯಕರನ್ನು ಕಟ್ಟಿಹಾಕುವ ಯತ್ನ ಹೊಸದೇನಲ್ಲ:

ರಾಜಕೀಯ ಇತಿಹಾಸದಲ್ಲೇ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ನಾಯಕರನ್ನು ಕಟ್ಟಿಹಾಕುವ ಕೆಲಸ ನಿರಂತರವಾಗಿ ನಡೆಯುತ್ತಲೇ ಬಂದಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು. “ರಾಜಕಾರಣದಲ್ಲಿ ಶೋಷಿತ ಸಮುದಾಯದ ನಾಯಕರೇ ಹೆಚ್ಚು ಟಾರ್ಗೆಟ್ ಆಗುತ್ತಾರೆ. ಇದು ಇವತ್ತಿನದಲ್ಲ, ಹೊಸದೇನೂ ಅಲ್ಲ. ಆದರೆ, ನಾವು ಇವೆಲ್ಲವನ್ನೂ ಮೀರಿ ಬೆಳೆಯಬೇಕಿದೆ. ಅಹಿಂದ ನಾಯಕನಾಗಲು ಕೆಪಿಸಿಸಿ ಅಧ್ಯಕ್ಷ ಸ್ಥಾನವೇ ಬೇಕಾಗಿಲ್ಲ, ಅದಕ್ಕೆ ಇರುವ ಮಾನದಂಡಗಳೇ ಬೇರೆ” ಎಂದು ಸ್ಪಷ್ಟಪಡಿಸಿದರು.

2028 ರ ಸಿಎಂ ರೇಸ್ ಹಾಗೂ ಡಿಕೆಶಿ ಹೇಳಿಕೆ:

2028 ಕ್ಕೆ ಮುಖ್ಯಮಂತ್ರಿ ಸ್ಥಾನದ ಹಕ್ಕು ಮಂಡಿಸಿದ್ದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “2028 ರ ಚುನಾವಣೆ ಇನ್ನೂ ಬಹಳ ದೂರವಿದೆ. ಮೊದಲು 2028 ರ ಚುನಾವಣೆಯಲ್ಲಿ ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಕನಿಷ್ಠ 120 ಸ್ಥಾನಗಳನ್ನು ಗೆಲ್ಲಬೇಕು. ಸರ್ಕಾರ ಬಂದ ಮೇಲಷ್ಟೇ ಮುಂದಿನ ಲೆಕ್ಕಾಚಾರಗಳು ಆರಂಭವಾಗಲಿವೆ” ಎಂದರು.

ಇದೇ ವೇಳೆ, “ನಾನು ಕೇವಲ ಎರಡು ವರ್ಷ ಸಿಎಂ ಆಗಿರಬೇಕಾ, 2028 ಕ್ಕೆ ಮತ್ತೆ ಐದು ವರ್ಷ ಸಿಎಂ ಆಗುವ ಬಯಕೆ ಇದೆ” ಎಂಬ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್, “ಅದಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಹೈಕಮಾಂಡ್ ಇದೆ, ಶಾಸಕರಿದ್ದಾರೆ. ಈಗಲೇ ಆ ಪ್ರಶ್ನೆ ಯಾಕೆ ಎಂದರು.

ಪರಮೇಶ್ವರ್ ಹೇಳಿಕೆಗೆ ಮುಗುಳ್ನಗೆ:

“2013 ರಲ್ಲಿ ನನ್ನನ್ನು ಸೋಲಿಸದೇ ಹೋಗಿದ್ದರೆ ನಾನೇ ಸಿಎಂ ಆಗುತ್ತಿದ್ದೆ” ಎಂಬ ಸಚಿವ ಜಿ. ಪರಮೇಶ್ವರ್ ಅವರ ಇತ್ತೀಚಿನ ಹೇಳಿಕೆಗೆ ಸತೀಶ್ ಜಾರಕಿಹೊಳಿ ಕೇವಲ ಮುಗುಳ್ನಗುತ್ತಾ, “ರಾಜಕಾರಣದಲ್ಲಿ ಇವೆಲ್ಲವೂ ಸಾಮಾನ್ಯ, ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ” ಎಂದು ಹಗುರವಾಗಿ ತೆಗೆದುಕೊಂಡರು. ಅಲ್ಲದೆ, “ಯಾರೂ ನನಗೆ ರಾಜಕೀಯದಲ್ಲಿ ಅಡ್ಡಗಾಲು ಹಾಕಿಲ್ಲ. ನಮ್ಮ ಪಕ್ಷದಲ್ಲಿ ಈಗ ‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ’ ನಿಯಮ ಜಾರಿಯಲ್ಲಿದೆ. ಹಿಂದೆ ಇದು ಇರಲಿಲ್ಲ, ಈಗ ಕಟ್ಟುನಿಟ್ಟಾಗಿದೆ. ನಾವು ಮಂತ್ರಿ ಸ್ಥಾನ ಹಾಗೂ ಅಧ್ಯಕ್ಷ ಸ್ಥಾನ ಎರಡನ್ನೂ ಕೇಳಿದ್ದೆವು. ಆದರೆ ಹೈಕಮಾಂಡ್ ಸದ್ಯ ಮಂತ್ರಿ ಜವಾಬ್ದಾರಿ ನೀಡಿದೆ, ಅದನ್ನೇ ನಿಭಾಯಿಸುತ್ತಿದ್ದೇವೆ” ಎಂದರು.

ಸಿದ್ದರಾಮಯ್ಯ ನಡೆ ಹಾಗೂ ಲಖನ್ ಹೇಳಿಕೆಗೆ ಕೌಂಟರ್:

“ಸಿದ್ದರಾಮಯ್ಯ ಅವರನ್ನು ಬದಲಾಯಿಸಿದರೆ ಕಾಂಗ್ರೆಸ್ 40 ಸ್ಥಾನಗಳನ್ನೂ ಗೆಲ್ಲುವುದಿಲ್ಲ” ಎಂಬ ಲಖನ್ ಜಾರಕಿಹೊಳಿ ಹೇಳಿಕೆಯನ್ನು ತಳ್ಳಿಹಾಕಿದ ಸಚಿವರು, “ಅದನ್ನು ಲಖನ್ ಮಾತ್ರವಲ್ಲ, ಬಿಜೆಪಿಯವರೂ ಅದನ್ನೇ ಹೇಳುತ್ತಿದ್ದಾರೆ” ಎಂದು ಲೇವಡಿ ಮಾಡಿದರು. “ಸಿದ್ದರಾಮಯ್ಯ ಜೆಡಿಎಸ್ ತೊರೆದಾಗ ನೀವು ಅವರ ಬೆನ್ನಿಗೆ ನಿಂತಿದ್ದೀರಿ, ಆದರೆ ಈಗ ಅವರು ನಿಮ್ಮ ಬೆನ್ನಿಗೆ ನಿಲ್ಲಲಿಲ್ಲವೇ?” ಎಂಬ ಪ್ರಶ್ನೆಗೆ, “ಸಿದ್ದರಾಮಯ್ಯ ಅವರು ತಾನೇ ಎಷ್ಟು ಜನರಿಗೆ ಅಂತ ಕೊಡಿಸಲು ಸಾಧ್ಯ? ಈಗ ಅವರು ಪರಮೇಶ್ವರ್ ಅವರಿಗೆ ಡಿಸಿಎಂ ಕೊಡಿಸಿದ್ದಾರೆ” ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಬೆಂಬಲಿಗರಿಗೆ ಸಂದೇಶ ಮತ್ತು ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ:

ಡಿಸಿಎಂ ಹುದ್ದೆ ತಪ್ಪಿದ್ದಕ್ಕೆ ಬೆಂಬಲಿಗರಲ್ಲಿ ತೀವ್ರ ಅಸಮಾಧಾನವಿರುವ ಬಗ್ಗೆ ಮಾತನಾಡಿದ ಅವರು, “ನನ್ನ ಬೆಂಬಲಿಗರಿಗೆ ನೋವಾಗಿರುವುದು ನಿಜ. ಹಾಗಂತ ಅವಕಾಶಗಳೇನೂ ಮುಚ್ಚಿ ಹೋಗಿಲ್ಲ, ಮುಂದಿನ ದಿನಗಳಲ್ಲಿ ಅವಕಾಶ ಸಿಗಲಿದೆ. ಸದ್ಯ ಮಂತ್ರಿಯಾಗಿ ಕೆಲಸ ಮಾಡಲು ಹೈಕಮಾಂಡ್ ಜವಾಬ್ದಾರಿ ಕೊಟ್ಟಿದೆ, ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಹೈಕಮಾಂಡ್ ನನಗೆ ಯಾವುದೇ ಕೈಕೊಟ್ಟಿಲ್ಲ” ಎಂದು ಕಾರ್ಯಕರ್ತರನ್ನು ಸಮಾಧಾನಪಡಿಸಿದರು.‌ ಇದೇ ಸಂದರ್ಭದಲ್ಲಿ, ಬೆಳಗಾವಿ ಜಿಲ್ಲೆಗೆ ಭೌಗೋಳಿಕ ಹಾಗೂ ರಾಜಕೀಯ ಹಿನ್ನೆಲೆಯಲ್ಲಿ ಇನ್ನೊಂದು ಸಚಿವ ಸ್ಥಾನವನ್ನು ನೀಡಲೇಬೇಕು ಎಂದು ಒತ್ತಾಯಿಸಿದ ಸಚಿವರು, ಆಸೀಫ್ ಸೇಠ್ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಮುಸ್ಲಿಂ ಸಮುದಾಯದವರು ಮನವಿ ಮಾಡಿದ್ದಾರೆ, ಈ ಬಗ್ಗೆ ನಾವು ಹೈಕಮಾಂಡ್ ಮತ್ತು ವರಿಷ್ಠರ ಜೊತೆಗೆ ಮಾತನಾಡಲಿದ್ದೇವೆ ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *