ಬೆಳಗಾವಿ: ಲೋಕೋಪಯೋಗಿ ಸಚಿವ ಹಾಗೂ ಕಾಂಗ್ರೆಸ್ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಅವರ ಕುಟುಂಬಕ್ಕೆ ಜಾರಿ ನಿರ್ದೇಶನಾಲಯ (ED) ಭಾರಿ ಶಾಕ್ ನೀಡಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರಿ ಪತಿ (ಬಾಮೈದ) ಹಾಗೂ ಅಳಿಯನೂ ಆಗಿರುವ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸಗಳು ಮತ್ತು ಕಚೇರಿ ಸೇರಿದಂತೆ ಒಟ್ಟು 7 ಕಡೆಗಳಲ್ಲಿ ಇಡಿ ಅಧಿಕಾರಿಗಳು ಬುಧವಾರ ಮುಂಜಾನೆಯಿಂದಲೇ ಏಕಕಾಲಕ್ಕೆ ದಾಳಿ ನಡೆಸಿ, ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.
ಬಳ್ಳಾರಿಯ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರರಾಗಿರುವ ವೈ. ಮಂಜುನಾಥ್, ಕಳೆದ ಹಲವು ವರ್ಷಗಳಿಂದ ಬೆಳಗಾವಿಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಬೇನಾಮಿ ಹೆಸರಿನಲ್ಲಿ ಜಮೀನು, ಬಾರ್ ಮತ್ತು ರೆಸ್ಟೋರೆಂಟ್ ಸೇರಿದಂತೆ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
7 ಕಡೆಗಳಲ್ಲಿ ಇಡಿ ಅಧಿಕಾರಿಗಳ ಸರಣಿ ಬೇಟೆ!
ಗೋವಾ ಮತ್ತು ಬೆಂಗಳೂರಿನ ಇಡಿ ಅಧಿಕಾರಿಗಳ ಜಂಟಿ ತಂಡ ಈ ದಾಳಿಯಲ್ಲಿ ಪಾಲ್ಗೊಂಡಿದ್ದು, ಸಿಆರ್‌ಪಿಎಫ್ (CRPF) ಸಿಬ್ಬಂದಿಯ ಬಿಗಿ ಭದ್ರತೆಯಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆದಿದ್ದು, ವಿವರ ಹೀಗಿದೆ:

- ಬೆಳಗಾವಿ: ಇಲ್ಲಿನ ದೂರದರ್ಶನ ಕೇಂದ್ರದ ಬಳಿ ಇರುವ ವೈ. ಮಂಜುನಾಥ್ ನಿವಾಸ.
- ಬೆಂಗಳೂರು: ಮಂಜುನಾಥ್ ಅವರಿಗೆ ಸೇರಿದ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆದಿದ್ದು, ಸದ್ಯ ಮಂಜುನಾಥ್ ಇಲ್ಲೇ ಇದ್ದಾರೆ ಎನ್ನಲಾಗಿದೆ.
- ಮೈಸೂರು: ಮಂಜುನಾಥ್ ಅವರ ಆಪ್ತ ಸ್ನೇಹಿತೆಯೊಬ್ಬರ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
- ಹಾಸನ (ಅರಸೀಕೆರೆ): ಅರಸೀಕೆರೆಯಲ್ಲಿರುವ ಮಂಜುನಾಥ್ ಆಪ್ತನ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
- ಅಥಣಿ (ಐನಾಪುರ): ಅಥಣಿ ತಾಲೂಕಿನ ಐನಾಪುರ ಗ್ರಾಮದಲ್ಲಿರುವ ವೈ. ಮಂಜುನಾಥ್ ಅವರ ಮತ್ತೊಬ್ಬ ಸ್ನೇಹಿತನ ಮನೆ ಮೇಲೂ ಇಡಿ ಬಿದ್ದಿದೆ.
ಇಡಿ ರೇಡಾರ್‌ನಲ್ಲಿ ಅಬಕಾರಿ ಎಸ್ಪಿ ಸತೀಶ್ ಕಾಗಲಿ!
ಇದೇ ವೇಳೆ, ವೈ. ಮಂಜುನಾಥ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ತುಮಕೂರು ಅಬಕಾರಿ ಎಸ್ಪಿ ಸತೀಶ್ ಕಾಗಲಿ ಅವರಿಗೂ ಇಡಿ ಬಿಸಿ ಮುಟ್ಟಿಸಿದೆ. ಮಂಜುನಾಥ್ ಜೊತೆಗೆ ವಿದೇಶಿ ಅಕ್ರಮ ವ್ಯವಹಾರಗಳಲ್ಲಿ ಶಾಮೀಲಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಸತೀಶ್ ಕಾಗಲಿ ಅವರ ನಿವಾಸಗಳ ಮೇಲೂ ದಾಳಿ ನಡೆದಿದೆ. ಬೆಳಗಾವಿಯ ಸದಾಶಿವ ನಗರದ ‘ಒನೆಸ್ಸ್ ಪ್ರೈಡ್’ ಅಪಾರ್ಟ್ಮೆಂಟ್‌ನಲ್ಲಿರುವ ಅವರ ನಿವಾಸ ಹಾಗೂ ಶ್ರೀನಗರದ ಮನೆ ಮತ್ತು ಅಥಣಿಯ ಐನಾಪುರದಲ್ಲಿರುವ ಮನೆಗಳ ಮೇಲೆ ಎರಡು ಇನ್ನೋವಾ ಕಾರುಗಳಲ್ಲಿ ಬಂದ ಇಡಿ ಅಧಿಕಾರಿಗಳು ಮುಂಜಾನೆಯಿಂದಲೇ ಶೋಧ ನಡೆಸುತ್ತಿದ್ದಾರೆ.
ಇದು ರೂಟಿನ್ ದಾಳಿ ಇರಬಹುದು, ನಾಳೆಯವರೆಗೂ ವೇಟ್ ಮಾಡೋಣ: ಸಚಿವ ಸತೀಶ್ ಜಾರಕಿಹೊಳಿ ಪ್ರಥಮ ಪ್ರತಿಕ್ರಿಯೆ
ಅಳಿಯ ವೈ. ಮಂಜುನಾಥ್ ಮನೆ ಮೇಲಿನ ಇಡಿ ದಾಳಿ ಕುರಿತು ಬೆಳಗಾವಿ ಜಿಲ್ಲೆಯ ಹಾರೂಗೇರಿಯಲ್ಲಿ ಮಾಧ್ಯಮಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. “ಇಡಿ ದಾಳಿ ರೂಟಿನ್ ಆಗಿ ಆಗಿರಬಹುದು. ಈಗಲೇ ಇದರ ಬಗ್ಗೆ ನನಗೇನು ಗೊತ್ತಿಲ್ಲ ಮತ್ತು ಏನು ಹೇಳುವುದಕ್ಕೂ ಆಗುವುದಿಲ್ಲ. ಇಡಿ ದಾಳಿ ಯಾಕೆ ಮಾಡಿದ್ದಾರೆ ಅನ್ನೋದು ನಮಗೂ ಗೊತ್ತಿಲ್ಲ. ಮಾಹಿತಿ ಬರುವವರೆಗೂ ಏನು ಹೇಳಲು ಆಗಲ್ಲ, ನಾಳೆಯವರೆಗೂ ವೇಟ್ ಮಾಡೋಣ. ಯಾಕೆ ಮಾಡಿದ್ದಾರೆ, ಏನು ದಾಖಲೆ ಕೇಳಿದ್ದಾರೆ ಅನ್ನೋದನ್ನು ನೋಡೋಣ. 7 ಕಡೆಯೋ ಅಥವಾ 10 ಕಡೆಯೋ ದಾಳಿ ನಡೆದಿದೆಯೋ ನನಗೆ ಗೊತ್ತಿಲ್ಲ. ನಾಳೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕ ಬಳಿಕ ಮಾತನಾಡುತ್ತೇನೆ. ಇದರಲ್ಲಿ ರಾಜಕೀಯ ಇದೆಯಾ ಇಲ್ಲವೋ ಅನ್ನೋದು ನಾಳೆಗೆ ಗೊತ್ತಾಗಲಿದೆ,” ಎಂದು ಜಾರಕಿಹೊಳಿ ಹೇಳಿದ್ದಾರೆ.
ಸದ್ಯ ಮುಂಜಾನೆಯಿಂದ ಆರಂಭವಾಗಿರುವ ಇಡಿ ಅಧಿಕಾರಿಗಳ ಈ ಆಪರೇಷನ್ ರಾಜ್ಯ ರಾಜಕೀಯ ಹಾಗೂ ಅಬಕಾರಿ ಇಲಾಖೆಯಲ್ಲಿ ತಲ್ಲಣ ಸೃಷ್ಟಿಸಿದ್ದು, ಇಡಿ ಶೋಧದ ಬಳಿಕ ಯಾವೆಲ್ಲಾ ಸ್ಫೋಟಕ ದಾಖಲೆಗಳು ಹೊರಬರಲಿವೆ ಎಂಬುದನ್ನು ಕಾದು ನೋಡಬೇಕಿದೆ.

