ಶತ್ರುತ್ವ ಮರೆತ ಮಮತೆ: ಶಿವಮೊಗ್ಗದಲ್ಲಿ ಬೆಕ್ಕಿನ ಮರಿಗೆ ಹಾಲುಣಿಸಿ ಮನುಷ್ಯನಿಗೆ ಪಾಠ ಕಲಿಸಿದ ಸಾಕು ನಾಯಿ!

Letest Post ಶಿವಮೊಗ್ಗ

ಶಿವಮೊಗ್ಗ: “ಬೆಕ್ಕು ಮತ್ತು ನಾಯಿ” ಎಂದರೆ ಜನ್ಮಜನ್ಮಾಂತರದ ವೈರತ್ವ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಪ್ರಕೃತಿಯ ನಿಯಮವನ್ನೇ ಮೀರಿ, ತನ್ನ ಬದ್ಧ ವೈರಿಯಾದ ಬೆಕ್ಕಿನ ಮರಿಗೆ ನಾಯಿಯೊಂದು ಹಾಲುಣಿಸುವ ಮೂಲಕ ತಾಯ್ತನದ ಮಮತೆಯನ್ನು ಉಣಬಡಿಸಿರುವ ಅಪರೂಪದ ಮತ್ತು ಮನಮಿಡಿಯುವ ಘಟನೆಯೊಂದು ಶಿವಮೊಗ್ಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಬೆಕ್ಕಿನ ಮರಿಗೆ ನಾಯಿ ಹಾಲುಣಿಸುವ ಅಪರೂಪದ ದೃಶ್ಯ

ಅರಸಾಳು ಗ್ರಾಮದ ಅಪರೂಪದ ದೃಶ್ಯ:

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮದ ನಿವಾಸಿ ಬೋರಣ್ಣ ಎಂಬುವವರ ಮನೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ಬೋರಣ್ಣ ಅವರು ಸಾಕಿರುವ ನಾಯಿಯೇ ಈ ಮಾನವೀಯ (ಪ್ರಾಣಿತ್ವದ) ಸಂದೇಶ ನೀಡಿದ ಅಪರೂಪದ ಜೀವಿ. ಸಾಮಾನ್ಯವಾಗಿ ಬೆಕ್ಕನ್ನು ಕಂಡರೆ ಸಾಕು, ಅಟ್ಟಿಸಿಕೊಂಡು ಹೋಗಿ ಕಚ್ಚುವ ನಾಯಿಗಳು, ಇಲ್ಲಿ ಮಾತ್ರ ಸಂಪೂರ್ಣ ಭಿನ್ನವಾಗಿ ವರ್ತಿಸಿದೆ.

ಮೊಬೈಲ್‌ನಲ್ಲಿ ಸೆರೆಯಾದ ಅಪರೂಪದ ದೃಶ್ಯ:

ಬೋರಣ್ಣ ಅವರ ಮನೆಯ ಸಾಕುನಾಯಿ ಮಲಗಿದ್ದಾಗ, ಪುಟ್ಟ ಬೆಕ್ಕಿನ ಮರಿಯೊಂದು ಯಾವುದೇ ಭಯವಿಲ್ಲದೆ ಬಂದು ನಾಯಿಯ ಮೊಲೆಹಾಲು ಕುಡಿಯಲು ಆರಂಭಿಸಿದೆ. ಇದನ್ನು ಕಂಡ ನಾಯಿ ಕೂಡ ಆ ಮರಿಯನ್ನು ತನ್ನದೇ ಮರಿಯಂತೆ ಭಾವಿಸಿ, ಪ್ರೀತಿಯಿಂದ ನೆಕ್ಕುತ್ತಾ ಹಾಲುಣಿಸಿದೆ. ಈ ಅಪರೂಪದ ಮತ್ತು ಭಾವನಾತ್ಮಕ ದೃಶ್ಯವನ್ನು ಮನೆಯವರು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ.

ಮಾನವ ಕುಲಕ್ಕೊಂದು ದೊಡ್ಡ ಸಂದೇಶ:

​”ಮಮತೆಗೆ ಯಾವುದೇ ಭೇದಭಾವವಿಲ್ಲ, ಪ್ರೀತಿಯೊಂದಿದ್ದರೆ ಜಗತ್ತನ್ನೇ ಗೆಲ್ಲಬಹುದು” ಎಂಬುದನ್ನು ಈ ಮೂಕಪ್ರಾಣಿ ಸಾಬೀತುಪಡಿಸಿದೆ.

​ಇಂದಿನ ಸಮಾಜದಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಮನುಷ್ಯರು ಪರಸ್ಪರ ದ್ವೇಷ ಸಾಧಿಸುತ್ತಾ, ವೈರತ್ವ ಬೆಳೆಸಿಕೊಳ್ಳುತ್ತಿದ್ದಾರೆ. ಆದರೆ, ಜನ್ಮಜಾತ್ ವೈರಿಗಳಾದ ಬೆಕ್ಕು ಮತ್ತು ನಾಯಿ ಇಲ್ಲಿ ತೋರಿರುವ ಪ್ರೀತಿ, ದ್ವೇಷ ಸಾಧಿಸುವ ಮನುಷ್ಯ ಕುಲಕ್ಕೆ ಒಂದು ದೊಡ್ಡ ಸಂದೇಶವಾಗಿದೆ. ಈ ಅಪರೂಪದ ದೃಶ್ಯವನ್ನು ನೋಡಿದ ಅರಸಾಳು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಸಾಕುನಾಯಿಯ ಮಾತೃ ವಾತ್ಸಲ್ಯಕ್ಕೆ ಫಿದಾ ಆಗಿದ್ದಾರೆ.

Leave a Reply

Your email address will not be published. Required fields are marked *