ಬೆಳಗಾವಿ: ಬೆಳಗಾವಿಯಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದು ಹೋಗಿದೆ. ಮೂರು ದಿನದ ಹೆಣ್ಣು ಕಂದಮ್ಮನನ್ನ ಕತ್ತುಹಿಸಿಕಿ ಕೊಲೆ ಮಾಡಲಾಗಿದೆ. ಹೆತ್ತವಳೇ ಕಂದಮ್ಮಳನ್ನ ಕೊಂದಿದ್ದು ಪಾಪಿ ಕೊಲೆಗಾರ್ತಿ ತಾಯಿಯನ್ನ ಪೊಲೀಸರು ವಶಕ್ಕೆ ಪಡೆದು ಜೈಲಿಗಟ್ಟಲಿದ್ದಾರೆ. ಗಡಿಜಿಲ್ಲೆ ಬೆಳಗಾವಿಯಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವ, ಎಂಥವರ ಎದೆಯೂ ಝಲ್ ಎನ್ನಿಸುವಂತಹ ಹೃದಯವಿದ್ರಾವಕ ಘಟನೆ ನಡೆದಿದೆ. ನೀವು ಹೀಗೆ ಮೇಲೆ ನೋಡಿರೋ ಪೋಟೋ ನವಜಾತ ಹೆಣ್ಣು ಶಿಶುವಿನದ್ದು. ಕಳೆದ ಮೂರು ದಿನಗಳ ಹಿಂದೆಯಷ್ಟೇ ತಾಯಿ ಗರ್ಭದಿಂದ ಜನ್ಮ ಪಡೆದಿದ್ದ ಹಸುಗುಸಿನ ಕೊಲೆಯಾಗಿದ್ದು, ಪಾಪದ ಕೂಸು ಕಣ್ಣು ಬಿಡುವ ಮೊದಲೇ ಬಾರದ ಲೋಕಕ್ಕೆ ಪಯಣ ಬೆಳೆಸಿದೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಿರೇಮುಲಂಗಿ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಹೆತ್ತ ತಾಯಿ ಅಶ್ವಿನಿ ಹಳಕಟ್ಟಿ (28) ಕೊಲೆ ಮಾಡಿದ ಹಂತಕಿ. ಇಂದು ತಾಯಿ ಮನೆಯಲ್ಲಿದ್ದಾಗ ಅಶ್ವಿನಿ ತನ್ನ ಮೂರು ದಿನದ ಹಸುಗುಸಿನ ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ತನ್ನ ಕೈಯಾರೆ ಎತ್ತಿ ಆಡಿಸಬೇಕಿದ್ದ, ಮುದ್ದಾಡಿ ಎದೆಹಾಲು ಕುಡಿಸಬೇಕಿದ್ದ ಹಂತಕಿ ತಾಯಿ ಅಶ್ವಿನಿ, ಹೆಣ್ಣು ಮಗು ಅನ್ನೋ ಒಂದೇ ಕಾರಣಕ್ಕೆ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಇಂಥ ಹೇಯ್ಯ ಕೃತ್ಯವೆಸಗಿದ್ದಾಳೆ. ಕೊಲೆ ಮಾಡಿದ ತಕ್ಷಣವೇ ತಾಯಿ ಮಗು ಉಸಿರಾಡುತ್ತಿಲ್ಲ ಅಂತಾ ಡ್ರಾಮಾ ಆರಂಭಿಸಿದ್ದಾಳೆ. ಆಗ ತಕ್ಷಣವೇ ಮಗುವನ್ನು ರಾಮದುರ್ಗ ಸರ್ಕಾರಿ ಆಸ್ಪತ್ರೆಗೆ ಕುಟುಂಬಸ್ಥರು ತೆಗೆದುಕೊಂಡು ಬಂದಿದ್ದು, ಆಗ ಆಸ್ಪತ್ರೆ ವೈದ್ಯರು ತಪಾಸಣೆ ಮಾಡಿ ಮಗುವನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಅಂತಾ ಶಂಕೆ ವ್ಯಕ್ತಪಡಿಸಿದ್ದಾರೆ.

ಇನ್ನೂ ಅತ್ತ ಆಸ್ಪತ್ರೆ ವೈದ್ಯರು ರಾಮದುರ್ಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಮಗುವಿನ ತಾಯಿ, ಅಜ್ಜಿ ಸೇರಿ ಕುಟುಂಬಸ್ಥರನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಹೆಣ್ಣು ಮಗುವಿನ ಜನ್ಮ ಆಗಿದೆ ಅಂತಾ ಕೊಲೆ ಮಾಡಿರುವ ವಿಚಾರ ಪಾಪಿ ತಾಯಿ ಅಶ್ವಿನಿ ಬಾಯ್ಬಿಟ್ಟಿದ್ದಾಳೆ. ಯಾಕೆಂದರೆ ಈಗಾಗಲೇ ಅಶ್ವಿನಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಈಗ ನಾಲ್ಕನೇ ಮಗು ಕೂಡಾ ಹೆಣ್ಣು ಹುಟ್ಟಿದ್ದರಿಂದ ಕೊಲೆ ಮಾಡಿರುವ ವಿಚಾರ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಎಷ್ಟೋ ಜನ ಮಹಿಳೆಯರು ಮಕ್ಕಳು ಆಗ್ತಿಲ್ಲ ಅಂತಾ ಇದ್ದಬಿದ್ದ ದೇವರಿಗೆಲ್ಲಾ ಹರಕೆ ಹೊರುತ್ತಾರೆ. ಮಕ್ಕಳು ಆಗಲ್ಲ ಅಂತಾ ಗೊತ್ತಾದ ಮೇಲೆ ದತ್ತು ಪಡೆದು ತಾಯಿ ಆಗದ ನೋವನ್ನ ಸಾಕು ಮಗುವಿನಿಂದ ನಿಗೀಸಿಕೊಂಡ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಆದ್ರೆ ಹೆಣ್ಣು ಮಗು ಅನ್ನೋ ಒಂದೇ ಒಂದು ಕಾರಣಕ್ಕೆ ತಾಯಿ ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ನಮ್ಮ ಸಮಾಜದಲ್ಲಿ ಇನ್ನೂ ಗಂಡು ಹೆಣ್ಣು ಅನ್ನೋ ಲಿಂಗ ಬೇದ ಜೀವಂತ ಇರೋದನ್ನ ಸಾಕ್ಷಿಕರಿಸುತ್ತಿದೆ.

ಒಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಭ್ರೂಣಹತ್ಯೆ ತಡೆಯಲು ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಅದರಲ್ಲೂ ಗಂಡು ಹೆಣ್ಣು ಲಿಂಗ ಅನುಪಾತದಲ್ಲಿ ಏರುಪೇರು ಆಗುವುದನ್ನ ತಡೆಯಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡ್ತಿದೆ. ಇಷ್ಟೆಲ್ಲಾ ಮಾಡಿದ್ರು ಇವತ್ತಿಗೂ ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಗುವಿನ ಬಗ್ಗೆ ತಾತ್ಸಾರದ ಮನೋಭಾವನೆ ಜೀವಂತ ಇದೇ ಎನ್ನೋದಕ್ಕೆ ರಾಮದುರ್ಗ ಪ್ರಕರಣವೇ ಸಾಕ್ಷಿ. ಹೆತ್ತಮ್ಮಳ ಕ್ರೂರಕೃತ್ಯದಿಂದ ಆ ಮೂವರು ಮಕ್ಕಳು ಅನಾಥವಾದ್ರೆ. ಅತ್ತ ಪಾಪಿ ತಾಯಿ ಕೊಲೆಗಾರ್ತಿಯಾಗಿ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ.


