
ಕೋರ್ಟ್ ನಲ್ಲಿ ಜಡ್ಜ್ ಎದುರಲ್ಲೇ ಮಾರಕಾಸ್ತ್ರದಿಂದ ಹೊಡೆದು ಮಹಿಳೆಯ ಕೊಲೆ ಯತ್ನ
ಅಥಣಿ: ಕೋರ್ಟ್ ಕಲಾಪ ನಡೆಯುವ ವೇಳೆ ಮಹಿಳೆಯನ್ನು ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ಮಂಗಳವಾರ ಮಧ್ಯಾಹ್ನ ಅಥಣಿ ನ್ಯಾಯಾಲಯದಲ್ಲಿ ನಡೆದಿದೆ.

ಮೀನಾಕ್ಷಿ ರಾಮಚಂದ್ರ ಶಿಂಧೆ (50) ಹಲ್ಲೆಗೊಳಗಾದ ಮಹಿಳೆಯಾಗಿದ್ದು, ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೋತನಟ್ಟಿ ಗ್ರಾಮದ ಬಾಬಾಸಾಹೇಬ್ ಚೌಹಾಣ ಎಂಬಾತ ಹಲ್ಲೆ ಮಾಡಿದ್ದ ಆರೋಪಿ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಬಾಬಾಸಾಹೇಬ್ ಸೋದರತ್ತೆ ಮೀನಾಕ್ಷಿ ಕೋರ್ಟ್ ಮೆಟ್ಟಿಲೇರಿದ್ದಳು. ಇದೇ ವಿಚಾರವಾಗಿ ಅನೇಕ ಬಾರಿ ಜಗಳವಾಗಿತ್ತು. ಇವತ್ತು ಸೋದರತ್ತೆ ಮೀನಾಕ್ಷಿ ಬೆನ್ನಟ್ಟಿದ ವ್ಯಕ್ತಿ ಕೋರ್ಟ್ ನಲ್ಲೆ ಕೊಲೆಗೆ ಯತ್ನಿಸಿದ್ದಾನೆ.
ಕುಡುಗೋಲಿನಿಂದ ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ್ದ ವೇಳೆ ತಪ್ಪಿಸಿಕೊಳ್ಳಲು ಮಹಿಳೆ ಕೋರ್ಟ್ ಹಾಲ್ ಗೆ ನುಗ್ಗಿದ್ದಾಳೆ. ಅಥಣಿಯ ಪ್ರಧಾನ ದಿವಾನಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಈ ಘಟನೆ ನಡೆದಿದ್ದು ಕ್ಷಣಕಾಲ ಆತಂಕದ ವಾತಾವರಣ ಸೃಷ್ಠುಅಗಿತ್ತು.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಅಥಣಿ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ್ದ ಆರೋಪಿ ಬಾಬಾಸಾಹೇಬ್ ನನ್ನು ಬಂಧಿಸಿದ್ದಾರೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
