ಬೆಳಗಾವಿ: ಕಿತ್ತೂರು ಕರ್ನಾಟಕ ಭಾಗದ ಅಭಿವೃದ್ಧಿ, ಜಲಸಂಪನ್ಮೂಲ ನಿರ್ವಹಣೆ ಹಾಗೂ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸುವರ್ಣ ಸೌಧದಲ್ಲಿ ವಿಭಾಗ ಮಟ್ಟದ ಶಾಸಕರು ಮತ್ತು ಅಧಿಕಾರಿಗಳ ಮಹತ್ವದ ಸಭೆ ನಡೆಸಿ, ಬಳಿಕ ಸುದ್ಧಿಗೋಷ್ಠಿಯಲ್ಲಿ ಸರ್ಕಾರದ ಹಲವು ಐತಿಹಾಸಿಕ ತೀರ್ಮಾನಗಳನ್ನು ಪ್ರಕಟಿಸಿದರು.
ರಾಜ್ಯದ ಹಿತದೃಷ್ಟಿಯಿಂದ ಪಕ್ಷಾತೀತವಾಗಿ ಎಲ್ಲ ಶಾಸಕರನ್ನು ಈ ಸಭೆಗೆ ಆಹ್ವಾನಿಸಲಾಗಿತ್ತು ಎಂದು ತಿಳಿಸಿದ ಸಿಎಂ, ಪ್ರಸ್ತುತ ಎದುರಾಗಿರುವ ನೀರಿನ ಬಿಕ್ಕಟ್ಟು ಮತ್ತು ಕೃಷಿ ಸವಾಲುಗಳನ್ನು ಎದುರಿಸಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದರು.

1. ಜಲಸಂಪನ್ಮೂಲ ಮತ್ತು ಡ್ಯಾಂ ಸುರಕ್ಷತೆಗೆ ಐತಿಹಾಸಿಕ ತೀರ್ಮಾನ
ಪ್ರಸ್ತುತ ಕಿತ್ತೂರು ಕರ್ನಾಟಕದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಪ್ರಧಾನಿಯವರೂ ಕೂಡ ಎಚ್ಚರಿಕೆ ಗಂಟೆ ನೀಡಿದ್ದಾರೆ. ಶೇ. 10 ರಿಂದ 30 ರಷ್ಟು ಮಳೆ ದಾಖಲಾಗಿದೆ. ಸದ್ಯ ತುಂಗಭದ್ರಾ ಜಲಾಶಯದಲ್ಲಿ ಭೀಕರವಾದ ಸಮಸ್ಯೆ ಎದುರಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ:
- ೫೦ ವರ್ಷ ತುಂಬಿದ ಡ್ಯಾಂಗಳ ಗೇಟ್ ಬದಲಾವಣೆ: ರಾಜ್ಯದಲ್ಲಿ 50 ವರ್ಷ ಪೂರೈಸಿರುವ ಎಲ್ಲಾ ಜಲಾಶಯಗಳ ಗೇಟ್‌ಗಳನ್ನು ಸಂಪೂರ್ಣವಾಗಿ ಬದಲಾಯಿಸಲು ತೀರ್ಮಾನಿಸಲಾಗಿದೆ.
- ತುಂಗಭದ್ರಾ ಹೂಳು ತೆಗೆಯುವಿಕೆ: ರೈತರನ್ನು ಬದುಕಿಸುವುದು ಸರ್ಕಾರದ ಮೊದಲ ಕರ್ತವ್ಯವಾಗಿದ್ದು, ತುಂಗಭದ್ರಾ ಜಲಾಶಯದ ಹೂಳು ತೆಗೆಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು.
- ಅಂತರರಾಜ್ಯ ಜಲ ಒಪ್ಪಂದ: ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಒಟ್ಟಾಗಿ ಸಭೆ ನಡೆಸಿ ಐತಿಹಾಸಿಕ ತೀರ್ಮಾನಕ್ಕೆ ಬಂದಿದ್ದೇವೆ. ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ನೀರು ಸಮುದ್ರಕ್ಕೆ ಹರಿದು ಪೋಲಾಗದಂತೆ ಹಾಗೂ ರಾಜ್ಯಗಳ ನಡುವೆ ಜಗಳವಾಡದೆ ಜಂಟಿಯಾಗಿ ನೀರನ್ನು ಹಿಡಿದಿಟ್ಟುಕೊಳ್ಳಲು ಒಮ್ಮತ ಮೂಡಿದೆ. ತಜ್ಞರ ಸಮಿತಿ (Technical Committee) ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
- ನದಿ ಜೋಡಣೆಗೆ ರೂ. 1 ಲಕ್ಷ ಕೋಟಿ ಪ್ರಾಜೆಕ್ಟ್: ಕೃಷ್ಣಾ, ಕಾವೇರಿ ಮತ್ತು ಗೋದಾವರಿ ನದಿಗಳ ಜೋಡಣೆ ವಿಚಾರದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದ್ದು, 1 ಲಕ್ಷ ಕೋಟಿ ರೂಪಾಯಿ ವೆಚ್ಚದ ಈ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ನೆರವು ಕೋರಲಾಗಿದೆ.

2. ಗ್ರಾಮೀಣ ಕ್ಷೇತ್ರಗಳಿಗೆ ತಲಾ 1 ಕೋಟಿ ರೂ. ವಿಶೇಷ ಅನುದಾನ
ರಾಜ್ಯದಲ್ಲಿ ಬರಗಾಲದ ಛಾಯೆ ಇದ್ದು, ನೀರಿನ ಸಮಸ್ಯೆ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಸುವರ್ಣ ಸೌಧದಲ್ಲಿ ಹೊಸ ತೀರ್ಮಾನ ಕೈಗೊಳ್ಳಲಾಗಿದ್ದು, ನಗರ ಪ್ರದೇಶಗಳನ್ನು ಹೊರತುಪಡಿಸಿ, ಗ್ರಾಮೀಣ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ತಲಾ 1 ಕೋಟಿ ರೂಪಾಯಿ ವಿಶೇಷ ಅನುದಾನ ಘೋಷಿಸಲಾಗಿದೆ. ಕುಡಿಯುವ ನೀರಿಗೆ ಕೊರತೆಯಾಗದಂತೆ ಡ್ಯಾಂ ಮತ್ತು ಕೆರೆಗಳಲ್ಲಿ ನೀರನ್ನು ಕಡ್ಡಾಯವಾಗಿ ಸಂಗ್ರಹಿಸಿಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದೇ ಮಾದರಿಯ ಸಭೆಯನ್ನು ಶೀಘ್ರದಲ್ಲೇ ಮೈಸೂರು ಹಾಗೂ ಬೆಂಗಳೂರು ಡಿವಿಜನ್‌ನಲ್ಲೂ ನಡೆಸಲಾಗುವುದು.
3. ಕೃಷಿ ಮತ್ತು ಅರಣ್ಯ ಇಲಾಖೆ ತೊಂದರೆಗೆ ಬ್ರೇಕ್
ರೈತರಿಗೆ ತೊಂದರೆಯಾಗದಂತೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ಪೈಪ್‌ಲೈನ್ ಅರಣ್ಯ ಪ್ರದೇಶದಲ್ಲಿ ಹಾದುಹೋಗುವಾಗ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುತ್ತಿರುವ ಬಗ್ಗೆ ಶಾಸಕರು ದೂರು ನೀಡಿದ್ದಾರೆ. ಸಾರ್ವಜನಿಕರ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಳಿಗೆ ಯಾವುದೇ ಅಡ್ಡಿ ಉಂಟುಮಾಡಬಾರದು ಎಂದು ಅರಣ್ಯ ಇಲಾಖೆಗೆ ಸ್ಪಷ್ಟ ಮಾರ್ಗದರ್ಶನ ನೀಡಲಾಗಿದೆ.
ರೈತರ ವಿಮೆ ಮತ್ತು ಮೋಡ ಬಿತ್ತನೆ:
ರೈತರಿಗೆ ಬೆಳೆ ವಿಮೆಯಲ್ಲಿ ಮೋಡಿಯಾಗುತ್ತಿದ್ದು, ದಲ್ಲಾಳಿಗಳ ದಂಧೆ ನಡೆಯುತ್ತಿದೆ ಎಂದು ಶಾಸಕರು ಗಮನ ಸೆಳೆದಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ತುರ್ತು ಸಭೆ ನಡೆಸಿ ಪರಿಶೀಲಿಸಲಾಗುವುದು. ಜೊತೆಗೆ, ಅನೇಕ ಶಾಸಕರು ಮೋಡ ಬಿತ್ತನೆಗೆ ಒತ್ತಾಯಿಸಿದ್ದು, ಈ ಹಿಂದಿನ ಮೋಡ ಬಿತ್ತನೆ ಕುರಿತ ವರದಿಯನ್ನು ತರಿಸಿಕೊಂಡು ಗಂಭೀರ ಚರ್ಚೆ ನಡೆಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.4. ಮುಜರಾಯಿ ದೇವಸ್ಥಾನಗಳ ಹುಂಡಿ ಸುರಕ್ಷತೆಗೆ ಸಿಸಿಟಿವಿ ಕಡ್ಡಾಯ
ಇತ್ತೀಚೆಗೆ ರಾಮಮಂದಿರದ ಹುಂಡಿ ದುರ್ಬಳಕೆ ವಿಚಾರ ಮುನ್ನೆಲೆಗೆ ಬಂದಿದ್ದು, ಇದು ನಮಗೆ ಮಾನಸಿಕವಾಗಿ ತೀವ್ರ ಅವಮಾನ ಉಂಟುಮಾಡಿದೆ. ಧರ್ಮದ ಹೆಸರಿನಲ್ಲಿ ಇಂತಹ ಅಕ್ರಮಗಳು ನಡೆಯಬಾರದು. ಆದ್ದರಿಂದ, ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳ ಹುಂಡಿಗಳ ಎದುರು ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸೂಚಿಸಲಾಗಿದೆ. ಹುಂಡಿಯ ಬೀಗ ತೆಗೆಯುವಾಗ ಹಾಗೂ ಮುಚ್ಚುವಾಗ ಕಡ್ಡಾಯವಾಗಿ ಕ್ಯಾಮೆರಾ ಆನ್ ಇರಬೇಕು. ಸಿಸಿಟಿವಿ ನಿಗಾಡಿಯಲ್ಲೇ ಹಣದ ಕಲೆಕ್ಷನ್ ಮತ್ತು ಎಣಿಕೆ ಪ್ರಕ್ರಿಯೆ ನಡೆಸಿ, ವರದಿಯನ್ನು ಆಯಾ ಜಿಲ್ಲೆಯ ಎಸ್‌ಪಿ ಹಾಗೂ ಡಿಸಿ ಕಚೇರಿಗೆ ಸಲ್ಲಿಸಬೇಕು ಎಂದು ಕಠಿಣ ಮಾರ್ಗಸೂಚಿ ಹೊರಡಿಸಲಾಗಿದೆ.
5. ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ: ಅರ್ಹರಿಗೆ ಮಾತ್ರ ಸೌಲಭ್ಯ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, ಕೆಲವು ತಾಂತ್ರಿಕ ಪರಿಷ್ಕರಣೆಗಳನ್ನು ಮಾಡಲಾಗುತ್ತಿದೆ ಎಂದರು.
- ಸಿಎಜಿ (CAG) ವರದಿ ಅನ್ವಯ ಕ್ರಮ: ಮೃತಪಟ್ಟವರ ಹೆಸರಿಗೂ ಗ್ಯಾರಂಟಿ ಹಣ ಸಂದಾಯವಾಗುತ್ತಿರುವುದು ಮತ್ತು ಒಂದೇ ಖಾತೆಗೆ ಅತಿಯಾದ ಹಣ ವರ್ಗಾವಣೆಯಾಗಿರುವ ಬಗ್ಗೆ ಸಿಎಜಿ ವರದಿಯಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಆಡಿಟರ್ಸ್ ನೀಡಿರುವ ಮಾರ್ಗದರ್ಶನವನ್ನು ಪರಿಶೀಲಿಸಲಾಗುತ್ತಿದೆ.
- ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಪರಿಷ್ಕರಣೆ: ಯೋಜನೆಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳನ್ನು ಪರಿಷ್ಕರಿಸಲಾಗುವುದು.
- ಆನ್‌ಲೈನ್ ಜಾತಿ ಪ್ರಮಾಣ ಪತ್ರ: ಎಸ್‌ಐಆರ್ ಕುರಿತು ಸೂಕ್ತ ಮಾರ್ಗದರ್ಶನ ನೀಡಲಾಗಿದ್ದು, ಸದ್ಯ 4.5 ಕೋಟಿ ಜಾತಿ ಪ್ರಮಾಣ ಪತ್ರಗಳು ಆನ್‌ಲೈನ್‌ನಲ್ಲಿ ಲಭ್ಯ ಇವೆ. ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿಯೊಂದು ಬೂತ್ ಮಟ್ಟದಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಲಾಗುವುದು.
6. ಮಹದಾಯಿ ಮತ್ತು ಗಡಿ ವಿವಾದ: ರಾಜ್ಯದ ಹಿತವೇ ಅಂತಿಮ
- ಮಹದಾಯಿ ಯೋಜನೆ: ಮಹದಾಯಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಕೇಂದ್ರ ಪರಿಸರ ಇಲಾಖೆ ಸಚಿವರನ್ನು ಐದು ಬಾರಿ ಭೇಟಿ ಮಾಡಿ ಚರ್ಚಿಸಲಾಗಿದೆ. ಅವರು ಇನ್ನೂ ಕೇವಲ ತಲೆ ಅಲ್ಲಾಡಿಸುತ್ತಿದ್ದಾರಷ್ಟೇ. ಆದರೂ ನಮ್ಮ ಪ್ರಯತ್ನ ಮುಂದುವರೆಯಲಿದ್ದು, ಅಗತ್ಯ ಬಿದ್ದರೆ ಮಹಾರಾಷ್ಟ್ರ ಮತ್ತು ಗೋವಾ ಮುಖ್ಯಮಂತ್ರಿಗಳೊಂದಿಗೂ ಮಾತುಕತೆ ನಡೆಸಲಾಗುವುದು.
- ಗಡಿ ವಿವಾದ: ಮಹಾರಾಷ್ಟ್ರ ಸಿಎಂ ಗಡಿ ಸಭೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಕರ್ನಾಟಕದ ಗಡಿ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಮಹಾಜನ್ ವರದಿಯೇ ಅಂತಿಮ, ಕೇವಲ ಮೀಟಿಂಗ್ ಮಾಡುವುದರಿಂದ ಏನೂ ಬದಲಾಗಲ್ಲ,” ಎಂದರು. ಕನ್ನಡಪರ ಹೋರಾಟಗಾರರನ್ನು ಬೆಂಗಳೂರಿಗೆ ಆಹ್ವಾನಿಸಿ ಚರ್ಚಿಸಲಾಗುವುದು ಎಂದು ತಿಳಿಸಿದರು.
- (ಗಮನಾರ್ಹ ಅಂಶ: ಸಚಿವ ಸಂಪುಟ ವಿಸ್ತರಣೆ ಕುರಿತಾದ ಮಾಧ್ಯಮಗಳ ಪ್ರಶ್ನೆಗೆ ಮುಖ್ಯಮಂತ್ರಿಗಳು ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದರು.)

