ಬೆಳಗಾವಿಯಲ್ಲಿ ‘ಕತ್ತಿ’ ವರ್ಸಸ್ ‘ಜಾರಕಿಹೊಳಿ’ ಟಾಕ್ ವಾರ್: ರಮೇಶ್ ಕತ್ತಿಗೆ ರಾಜಕೀಯ ಪಾಠ ಮಾಡಿದ ಸತೀಶ್!
ಬೆಳಗಾವಿ: ಕುಂದಾನಗರಿ ಬೆಳಗಾವಿಯ ರಾಜಕಾರಣದಲ್ಲಿ ಸದಾ ಒಂದಿಲ್ಲೊಂದು ರಾಜಕೀಯ ಸಂಚಲನ ಸೃಷ್ಟಿಯಾಗುತ್ತಲೇ ಇರುತ್ತದೆ. ಇದೀಗ ಜಿಲ್ಲೆಯ ಇಬ್ಬರು ಪ್ರಭಾವಿ ನಾಯಕರ ನಡುವೆ ಭಾರಿ ವಾಕ್ಸಮರ ಶುರುವಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯ ಕಿಚ್ಚು ಈಗಿನಿಂದಲೇ ಹೊತ್ತಿಕೊಂಡಿದೆ. ಮಾಜಿ ಸಂಸದ ರಮೇಶ್ ಕತ್ತಿ ಅವರ ಬಹಿರಂಗ ಸವಾಲಿಗೆ ಸಚಿವ ಸತೀಶ್ ಜಾರಕಿಹೊಳಿ ತಮ್ಮದೇ ಸೈಲೆಂಟ್ ಶೈಲಿಯಲ್ಲಿ ಮಾತಿನಲ್ಲೇ ತಿವಿಯುವ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ.
ರಮೇಶ್ ಕತ್ತಿ ಹಾಕಿದ್ದ ಸವಾಲೇನು?
ಇತ್ತೀಚೆಗೆ ಹುಕ್ಕೇರಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಬಿಜೆಪಿ ನಾಯಕ ರಮೇಶ್ ಕತ್ತಿ, ಸಚಿವ ಸತೀಶ್ ಜಾರಕಿಹೊಳಿ ಅವರ ಕ್ಷೇತ್ರವಾದ ಯಮಕನಮರಡಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು. “ಹುಕ್ಕೇರಿ ಪಟ್ಟಣದ ರಾಣಿ, ಯಮಕನಮರಡಿ ಪ್ರೀತಿಯ ರಾಣಿ” ಎಂದು ಮಾರ್ಮಿಕವಾಗಿ ಬಣ್ಣಿಸಿದ್ದ ರಮೇಶ್ ಕತ್ತಿ, ಜಾರಕಿಹೊಳಿ ಕೋಟೆಗೆ ಲಗ್ಗೆ ಇಡುವ ಮುನ್ಸೂಚನೆ ನೀಡಿದ್ದರು. ಅಷ್ಟಕ್ಕೇ ನಿಲ್ಲದ ಅವರು, “ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಯಮಕನಮರಡಿಯಲ್ಲಿಯೇ ನಿಮಗೆ ತಕ್ಕ ಉತ್ತರ ಕೊಡುತ್ತೇನೆ” ಎಂದು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಪರೋಕ್ಷವಾಗಿ ಸವಾಲು ಹಾಕಿದ್ದರು.
ಮಾತಿನಲ್ಲೇ ಚುಚ್ಚಿದ ಸಚಿವ ಸತೀಶ್ ಜಾರಕಿಹೊಳಿ!
ರಮೇಶ್ ಕತ್ತಿ ಅವರ ಈ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಅತ್ಯಂತ ಶಾಂತಚಿತ್ತರಾಗಿಯೇ, ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕತ್ತಿ ಅವರ ಸವಾಲನ್ನು ಲಘುವಾಗಿ ತಳ್ಳಿಹಾಕುತ್ತಲೇ ರಾಜಕೀಯ ಪಾಠ ಮಾಡಿದ್ದಾರೆ.
“ಅಂತಹ ಹೇಳಿಕೆಗೂ ಮುಂಬರುವ ಚುನಾವಣೆಗೂ ಯಾವುದೇ ಸಂಬಂಧವೇ ಇಲ್ಲ. ರಾಜಕಾರಣದಲ್ಲಿ ಇಂತಹವರನ್ನು ನಾನು ಬಹಳಷ್ಟು ಮಂದಿಯನ್ನು ನೋಡಿದ್ದೇನೆ. ಕೇವಲ ಉತ್ತರ ಕೊಡುವವರನ್ನು ಮಾತ್ರವಲ್ಲ, ತೆರೆಮರೆಯಲ್ಲಿದ್ದು ಉತ್ತರ ಕೊಡಿಸುವವರನ್ನೂ ನಾವು ನೋಡಿಕೊಂಡು ಬಂದಿದ್ದೇವೆ” ಎಂದು ಸತೀಶ್ ಜಾರಕಿಹೊಳಿ ಮಾರ್ಮಿಕವಾಗಿ ನುಡಿದಿದ್ದಾರೆ.
‘ಮೇ 2028’ ಕ್ಕೆ ಸಿಗಲಿದೆ ಅಂತಿಮ ಉತ್ತರ!
ರಮೇಶ್ ಕತ್ತಿ ಅವರ ಸವಾಲನ್ನು ಸ್ವೀಕರಿಸುತ್ತಲೇ ತಮ್ಮ ರಾಜಕೀಯ ಶಕ್ತಿಯ ಪ್ರದರ್ಶನಕ್ಕೆ ಕಾಲ ಕೂಡಿಬರಬೇಕು ಎಂದಿರುವ ಸಚಿವರು, “ಯಾರ ಯಾರ ಶಕ್ತಿ ಎಷ್ಟಿದೆ ಅನ್ನೋದು ಆಯಾ ಸಂದರ್ಭ ಬಂದಾಗಲೇ ಗೊತ್ತಾಗಲಿದೆ. ಈಗಲೇ ಆ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಇನ್ನೂ ಚುನಾವಣೆಗೆ ಎರಡು ವರ್ಷ ಬಾಕಿ ಇದೆ. 2028ರ ಮೇ ತಿಂಗಳಲ್ಲಿ ಚುನಾವಣೆ ನಡೆದಾಗ ಎಲ್ಲದಕ್ಕೂ ಸ್ಪಷ್ಟ ಉತ್ತರ ಸಿಗಲಿದೆ” ಎಂದು ಸದ್ದಿಲ್ಲದೆ ಸವಾಲು ಎಸೆದಿದ್ದಾರೆ.
ಟ್ವಿಸ್ಟ್ ಪಡೆದುಕೊಂಡ ಬೆಳಗಾವಿ ರಾಜಕೀಯ
ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್ (DCC) ಚುನಾವಣೆ ಹಾಗೂ ಸ್ಥಳೀಯ ಸಹಕಾರಿ ಸಂಘಗಳ ಚುನಾವಣೆಯ ಬೆನ್ನಲ್ಲೇ ಜಾರಕಿಹೊಳಿ ಮತ್ತು ಕತ್ತಿ ಕುಟುಂಬದ ನಡುವಿನ ವೈಷಮ್ಯ ಮತ್ತಷ್ಟು ತಾರಕಕ್ಕೇರಿದೆ. ರಮೇಶ್ ಕತ್ತಿ ಅವರ ‘ಯಮಕನಮರಡಿ’ ಸವಾಲು ಮತ್ತು ಅದಕ್ಕೆ ಸತೀಶ್ ಜಾರಕಿಹೊಳಿ ನೀಡಿರುವ ‘ಸೈಲೆಂಟ್ ಕೌಂಟರ್’ ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಂಬರುವ ದಿನಗಳಲ್ಲಿ ಈ ಇಬ್ಬರು ನಾಯಕರ ನಡುವಿನ ಈ ‘ಟಾಕ್ ವಾರ್’ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
