ಬೆಳಗಾವಿ: ಚಿಕ್ಕೋಡಿ ಮಾಜಿ ಸಂಸದ ರಮೇಶ್ ಕತ್ತಿ ಅವರ ಮೇಲಿನ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಕ್ಕೇರಿ ಗ್ರೇಡ್-2 ತಹಶಿಲ್ದಾರ ಮೇಲೆ ಸರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇದೇ ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಶನಿವಾರ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಕ್ಕೇರಿ ಗ್ರೇಡ್-2 ತಹಶಿಲ್ದಾರ ವಾಲ್ಮೀಕಿ ಸಮಾಜಕ್ಕೆ ಮಾಡಿರುವ ಅನ್ಯಾಯದ ಕುರಿತು ಚಳಿಗಾಲದ ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತರಲಾಗುವುದು. ಇದು ಕೇವಲ ವಾಲ್ಮೀಕಿ ಸಮಾಜ ಮಾತ್ರವಲ್ಲ, ಹಿಂದುಳಿದ ಹಾಗೂ ಎಸ್ಸಿ, ಎಸ್ಟಿ ಸಮಾಜದ ನಕಲಿ ದಾಖಲೆ ಸೃಷ್ಟಿಸಿ ಅಹಿಂದ ಜನಾಂಗಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಇದೇ ವಿಚಾರವಾಗಿ ನಾವು ಜನತಾ ನ್ಯಾಯಾಲಯಕ್ಕೆ ಹೋಗಲು ನಿರ್ಧರಿಸಿದ್ದೇವೆ ಎಂದರು.

ಹುಕ್ಕೇರಿ ಗ್ರೇಡ್- 2 ತಹಶಿಲ್ದಾರ ವಿರುದ್ದ ಗಂಭೀರ ಆರೋಪ ಇದೆ. ಆದರೆ ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ರಾಜ್ಯ ಸರಕಾರ ಕೇವಲ ಸರ್ಕಾರಿ ವಕೀಲರ ಮೂಲಕ ಕಾರಣ ಕೇಳಿ ನೋಟಿಸ್ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ನಾಯಕರಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿರುವ ಹುಕ್ಕೇರಿ ಗ್ರೇಡ್ -2 ತಹಶಿಲ್ದಾರ ಮೇಲೆ ಕ್ರಮ ಕೈಗೊಳ್ಳಬೇಕು. ನಮಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು. ಈಗಾಗಲೇ ಮತ್ತೊಂದು ಬಾರಿ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇವೆ. ಅಲ್ಲದೆ, ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೇ ವಿಪಕ್ಷ ನಾಯಕ ಆರ್. ಅಶೋಕ ಗಮನಕ್ಕೆ ತಂದು ಡಿ.8 ರಂದು ಸದನದ ಒಳಗೆ ಹಾಗೂ ಡಿ.19 ರಂದು ಸದನದ ಹೊರಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಅಹಿಂದ ಸಮಾಜದಕ್ಕೆ ಅನ್ಯಾಯವಾಗಿದೆ. ಅಹಿಂದ ನಾಯಕ ಎಂದು ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಸಮಾಜಕ್ಕೆ ಅನ್ಯಾಯವಾವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.
ಇನ್ನು ಬಿಜೆಪಿ ರೆಬೆಲ್ ಟಿಮ್ ದೆಹಲಿ ಪ್ರವಾಸ ವಿಚಾರವಾಗಿ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ನಮ್ಮನ್ನು ದೆಹಲಿಗೆ ಕಳುಹಿಸಿದ್ದು ವಿಜಯೇಂದ್ರ. ಅವರ ಆದೇಶದಂತೆ ನಾವು ದೆಹಲಿಗೆ ಹೋಗಿದ್ದೇವು ಎಂದು ಅವರೇ ಹೇಳಿದ್ದಾರೆ ಎಂದು ಲೇವಡಿ ಮಾಡಿದ ಅವರು, ಬಿಜೆಪಿಯಲ್ಲಿ ಎಷ್ಟೇ ಜಗಳ ಬಂದರೂ ಪಕ್ಷದ ಚೌಕಟ್ಟು ಬಂದಾಗ ನಾವೆಲ್ಲರೂ ಒಂದೇ ಇರುತ್ತೇವೆ ಎಂದರು. ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯ ಬಂದಾಗ ಎಲ್ಲ ಶಾಸಕ, ಸಚಿವರು ಒಂದಾಗಿ ಧ್ವನಿ ಎತ್ತುತ್ತೇವೆ. ಈ ವಿಚಾರದಲ್ಲಿ ಅಧಿವೇಶನದಲ್ಲಿ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.


