ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಸಿಎಂ ಖುರ್ಚಿ ಹಗ್ಗಜಗ್ಗಾಟ ಮುಂದುವರೆದಿದೆ. ಈ ಮಧ್ಯೆ ದೋಸ್ತಿ ಸರ್ಕಾರ ಬೀಳಿಸಿದ್ದ ರಮೇಶ್ ಜಾರಕಿಹೊಳಿ ದಿಢೀರ್ ಪ್ರತ್ಯಕ್ಷವಾಗಿದ್ದಾರೆ. ಶಾಸಕರ ನಂಬರ್ ಗೇಮ್ ಡಿಕೆಶಿ ಬಳಿಯಿಲ್ಲಾ, 50 ಶಾಸಕರಿದ್ದರೆ ಈಗಲೇ ಸಿಎಂ ಮಾಡೋಣಾ ಅಂತಾ ರಮೇಶ್ ಜಾರಕಿಹೊಳಿ ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.
ರಾಜ್ಯ ಕಾಂಗ್ರೆಸ್ ನಲ್ಲಿ ಈಗ ಮುಖ್ಯಮಂತ್ರಿ ಕುರ್ಚಿ ಕಿತ್ತಾಟ ಜೋರಾಗಿದೆ. ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣ ಆಗುತ್ತಿದ್ದಂತೆ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ಶುರುವಾಗಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಅಂದು ಕಾಂಗ್ರೆಸ್ ಜೆಡಿಎಸ್ ನ ದೋಸ್ತಿ ಸರ್ಕಾರದ ಪತನಕ್ಕೆ ಬೆಳಗಾವಿ ರಾಜಕೀಯ ಮುನ್ನುಡಿ ಬರೆದಿತ್ತು. ಈಗಲೂ ಪ್ರಸ್ತುತ ರಾಜಕೀಯ ಕ್ರಾಂತಿಯಲ್ಲಿ ಬೆಳಗಾವಿ ಜಿಲ್ಲೆಯ ನಾಯಕರು ಸೈಲೆಂಟ್ ಆಗಿಯೇ ರಾಜಕೀಯ ದಾಳ ಉರುಳಿಸುತ್ತಿದ್ದಾರೆ. ನಿನ್ನೆಯಷ್ಟೇ ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಎಲ್ಲರ ಶ್ರಮವಿದೆ.

ಸರ್ಕಾರದ ರಚನೆ ವಿಚಾರದಲ್ಲಿ ಇತಿಮಿತಿಯಲ್ಲಿ ಮಾತನಾಡಬೇಕು ಅಂತಾ ಹೇಳ್ತಾ ತೆನಸಿಂಗ್ ಹಿಮಾಲಯ ಪರ್ವತ ಏರಿದ ಕಥೆ ಹೇಳಿ ಡಿಕೆಶಿ ಗೆ ಕೌಂಟರ್ ಕೊಟ್ಟಿದ್ದರು. ಈಗ ಸತೀಶ್ ಸಹೋದರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ದಿಢೀರ್ ಅಂತಾ ಬೆಳಗಾವಿಯಲ್ಲಿ ಪ್ರೇಸ್ಮೀಟ್ ನಡೆಸಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ಬಳಿ ಸಿಎಂ ಆಗಲು ಬೇಕಾದ ಶಾಸಕರ ಬೆಂಬಲವಿಲ್ಲ. ಸಿಎಂ ಆಗಲು ಬೇಕಿರೋದು 50 ಶಾಸಕರ ನಂಬರ್ ಗೇಮ್. ಈ 50 ಶಾಸಕರ ನಂಬರ್ ಗೇಮ್ ಡಿಕೆಶಿ ಬಳಿ ಇದ್ದರೇ ಈಗಲೇ ಮುಖ್ಯಮಂತ್ರಿ ಮಾಡೋಣ ಅಂತಾ ರಮೇಶ್ ಜಾರಕಿಹೊಳಿ ವ್ಯಂಗ್ಯ ಮಾಡಿದ್ದಾರೆ.
ಇನ್ನೂ ಕಾಂಗ್ರೆಸ್ ನಲ್ಲಿ ಅಧಿಕಾರಕ್ಕಾಗಿ ಆಂತರಿಕ ಕಚ್ಚಾಟದ ಮಧ್ಯೆ ಮತ್ತೆ ದೋಸ್ತಿ ಸರ್ಕಾರದ ಪತನದ ವಿಚಾರ ಮುನ್ನಲೇಗೆ ಬಂದಿದೆ. ಅಂದು ಆಪರೇಷನ್ ಕಮಲದ ಮುಂದಾಳತ್ವ ವಹಿಸಿದ್ದು ನಾನೆ. ಬೆಳಗಾವಿ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ಮಾಡಿದ್ದಕ್ಕೆ ಸಮ್ಮಿಶ್ರ ಸರ್ಕಾರ ಬೀಳಿಸಿದ್ದೇವೆ. ದೇವೇಗೌಡರ ಹೇಳಿಕೆಗೆ ನಾನು ಪ್ರತಿಕ್ರಿಯೆ ಮಾಡುವುದಿಲ್ಲ ಎಂದಿರೋ ರಮೇಶ್ ಜಾರಕಿಹೊಳಿ. ದೋಸ್ತಿ ಸರ್ಕಾರದ ಪತನದಲ್ಲಿ ಸಿದ್ದರಾಮಯ್ಯ ಪಾತ್ರ ಇರಲಿಲ್ಲ ಅಂತಾ ಪರೋಕ್ಷವಾಗಿ ಸ್ಪಷ್ಟನೆ ಕೊಟ್ಟಿದ್ದಾರೆ.

ಕಾಂಗ್ರೆಸ್ ನಲ್ಲಿ ಆಗೋ ಕ್ರಾಂತಿ ಬಗ್ಗೆ ಗೊತ್ತಿಲ್ಲ. ಆದ್ರೆ ಬಿಜೆಪಿಯಲ್ಲಿ ನಾಯಕತ್ವದ ಬದಲಾವಣೆ ಕ್ರಾಂತಿ ಇಲ್ಲವೇ ಇಲ್ಲ. ಬಿಜೆಪಿ ಹೈಕಮಾಂಡ ನಿರ್ಧಾರಕ್ಕೆ ಬದ್ಧವಾಗಿದ್ದೇವೆ. ಜೀವನ ಪೂರ್ತಿ ಡಿಕೆಶಿ, ವಿಜಯೇಂದ್ರ ನಾಯಕತ್ವವನ್ನ ನಾನು ಒಪ್ಪುವುದಿಲ್ಲ. ಆಯಾ ರಾಜಕೀಯ ಸನ್ನಿವೇಶಕ್ಕೆ ತಕ್ಕಂತೆ ನಿರ್ಧಾರ ಮಾಡ್ತಿನಿ ಅಂತಾ ಹೇಳುವ ಮೂಲಕ ರಮೇಶ್ ಜಾರಕಿಹೊಳಿ ಡಿಕೆಶಿ ಬಿಜೆಪಿ ಸೇರ್ಪಡೆ ಬಗ್ಗೆ ಅಡ್ಡ ಗೋಡೆಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಯಾವುದೇ ಸರ್ಕಾರ ರಚನೆಯಾದ್ರು, ಪತನವಾದ್ರು ಬೆಳಗಾವಿ ಜಿಲ್ಲೆಯ ರಾಜಕೀಯ ನಂಟು ಇದ್ದೇ ಇರುತ್ತೆ. ಕಾಂಗ್ರೆಸ್ ನಲ್ಲಿ ಡಿಕೆಶಿ ವಿರುದ್ಧ ಅಂದು ರಮೇಶ್ ಜಾರಕಿಹೊಳಿ ಇಂದು ಸತೀಶ್ ಜಾರಕಿಹೊಳಿ ಬಹಿರಂಗವಾಗಿ ಹೇಳಿಕೆ ಕೊಡ್ತಿದ್ದಾರೆ. ಸದ್ಯ ಆಗ್ತಿರೋ ರಾಜಕೀಯ ಮೇಲಾಟದಲ್ಲಿ ಜಾರಕಿಹೊಳಿ ಬ್ರದರ್ಸ್ ಪಾತ್ರ ನಿರ್ಣಾಯಕ ಆಗೋ ಲಕ್ಷಣಗಳು ಗೋಚರಿಸುತ್ತಿವೆ.


