
ಧಾರವಾಡ: ಭೀಕರ ರಸ್ತೆ ಅಪಘಾತದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಅಣ್ಣಿಗೇರಿ ಹೊರವಲಯದಲ್ಲಿ ನಡೆದಿದೆ. ಪ್ರಸ್ತುತ ಹಾವೇರಿಯಲ್ಲಿ ಲೋಕಾಯುಕ್ತ ಸಿಪಿಐ ಆಗಿ ಕರ್ತವ್ಯದಲ್ಲಿದ್ದ 2003 ರ ಬ್ಯಾಚ್ ನ ದಕ್ಷ ಅಧಿಕಾರಿ ಪಂಚಾಕ್ಷರಿ ಸಾಲೀಮಠ ಮೃತ ದುರ್ದೈವಿಯಾಗಿದ್ದು, ಕರ್ನಾಟಕ ಪೊಲೀಸ್ ಇಲಾಖೆ ಸೇರಿದಂತೆ ಪಂಚಾಕ್ಷರಿ ಸಾಲಿಮಠ ಅವರ ಆಪ್ತ ವರ್ಗ ಕಂಬನಿ ಮಿಡಿದಿದೆ.
ಬೈಲಹೊಂಗಲ, ಗದಗ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಹಲವೆಡೆ ಕರ್ತವ್ಯ ನಿರ್ವಹಿಸಿದ್ದ ಇವರು ಸಧ್ಯ ಹಾವೇರಿಯ ಲೋಕಾಯುಕ್ತ ಸಿಪಿಐ ಆಗಿ ಕರ್ತವ್ಯದಲ್ಲಿದ್ದರು. ಮೂಲಗಳ ಪ್ರಕಾರ ಮೃತ ಪಂಚಾಕ್ಷರಿ ಸಾಲೀಮಠ, ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ತಮ್ಮದೇ i20 ಕಾರಿನಲ್ಲಿ ಖುದ್ದು ಕಾರು ಚಾಲನೆ ಮಾಡಿಕೊಂಡು ಹೊರಟ್ಟಿದ್ದರು ಎನ್ನಲಾಗಿದೆ. ಈ ವೇಳೆ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕದ ತೆಗ್ಗಿಗೆ ನುಗ್ಗಿ ಧಗಧಗ ಹೊತ್ತಿ ಉರಿದಿದೆ. ಈ ವೇಳೆ ಕಾರ್ ನಲ್ಲಿದ್ದ ಲೋಕಾಯುಕ್ತ ಇನ್ಸ್ಪೆಕ್ಟರ್ ಸಾಲಿಮಠ ಸಜೀವ ದಹನವಾಗಿದ್ದಾರೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹೊರ ಹೊಲಯದಲ್ಲಿ ಈ ಭೀಕರ ಅಪಘಾತ ನಡೆದಿದ್ದು ಪೊಲೀಸ್ ಅಧಿಕಾರಿ ಜೊತೆಗೆ I20 ಕಾರ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಇನ್ನು ಮೃತ ಅಧಿಕಾರಿಯ ಕುಟುಂಬಸ್ಥರು ಗದಗದಲ್ಲಿ ಇರುವ ಕಾರಣ ಗದಗ ಕಡೆಗೆ ಹೊರಟಿದ್ದರು ಎನ್ನಲಾಗಿದೆ.

ಅಪಘಾತ ನಡೆದ ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಧಗಧಗಿಸುತ್ತಿದ್ದ ಬೆಂಕಿಯನ್ನು ನಂದಿಸಲಾಗದೇ ಮಮ್ಮಲ ಮರುಗಿದರು. ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಜವರಾಯನ ಅಟ್ಟಹಾಸಕ್ಕೆ ಪೊಲೀಸ್ ಅಧಿಕಾರಿಯ ದೇಹ ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿತ್ತು. ಅಣ್ಣಿಗೇರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಅಣ್ಣಿಗೇರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


