ಮುಖ್ಯಮಂತ್ರಿಗಳಿಂದ ಇ-ಖಾತಾ ಲೋಕಾರ್ಪಣೆ, ಪೌರಕಾರ್ಮಿಕರಿಗೆ ನೇಮಕಾತಿ ಆದೇಶ, ಮನೆಗಳ ಹಕ್ಕುಪತ್ರಗಳ ವಿತರಣೆ

Letest Post ರಾಜ್ಯ

ಬೆಳಗಾವಿ ಸುವರ್ಣಸೌಧ ಡಿ.18. (ಕರ್ನಾಟಕ ವಾರ್ತೆ): ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಡಿ.18 ರಂದು ಇ-ಖಾತಾ ಸೌಕರ್ಯಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಬೆಳಗಾವಿಯ ಸುವರ್ಣವಿಧಾನಸೌಧದ ಸಭಾಂಗಣದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರಗಳ ಮತ್ತು ಮನೆಯ ಹಕ್ಕುಪತ್ರಗಳ ವಿತರಣೆಗೆ ಸಹ ಅವರು ಚಾಲನೆ ನೀಡಿದರು.

ಸಮಾರಂಭದಲ್ಲಿ ಇ-ಖಾತಾ ಕೈಪಿಡಿ ಬಿಡುಗಡೆ ಮಾಡಲಾಯಿತು. ಇದೇ ವೇಳೆ ಬೆಳಗಾವಿಯ 127 ಪೌರ ಕಾರ್ಮಿಕರಿಗೆ ಖಾಯಂ ನೇಮಕಾತಿ ಆದೇಶ ಪತ್ರ ವಿತರಣೆ ಸಂಬಂಧ ಸಾಂಕೇತಿಕವಾಗಿ 10 ಜನರಿಗೆ ನೇಮಕಾತಿ ಆದೇಶ ಪತ್ರ ನೀಡಲಾಯಿತು. ಅದೇ ರೀತಿ ವಿಜಯಪುರದ ಪೌರಕಾರ್ಮಿಕರಿಗೆ ಖಾಯಂ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು.‌ ಅದೇ ರೀತಿ ವಿಜಯಪುರದ ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ 60 ಪೌರ ಕಾರ್ಮಿಕರಿಗೆ ಮನೆಯ ಸ್ವಾಧೀನ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಸಾರ್ವಜನಿಕರ ಆಸ್ತಿ ದಾಖಲೆಯನ್ನು ಮತ್ತಷ್ಟು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಇ-ಖಾತಾ ಸೇವೆ ಒದಗಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ತಿಳಿಸಿದರು. ನಗರಾಭಿವೃದ್ಧಿ ಮತ್ತು ನಗರ ಯೋಜನೆಯ ಸಚಿವರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ ಅವರು, ಪೌರಕಾರ್ಮಿಕರ ಸೇವೆ ಅತ್ಯಂತ ಅನನ್ಯವಾಗಿದ್ದು, ಅವರು ನೆಮ್ಮದಿಯಾಗಿರುವಂತೆ ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ಮತ್ತು ಮನೆಯ ಹಕ್ಕುಗಳ ಪತ್ರ ವಿತರಣೆ ಮಾಡಿರುವುದು ರಾಜ್ಯ ಸರ್ಕಾರ ಮತ್ತು ಪೌರಾಡಳಿತ ಸಚಿವರ ಉತ್ತಮ ಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಈ ವೇಳೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಸುರೇಶ ಬಿ.ಎಸ್. ಅವರು ಮಾತನಾಡಿ, ಇ-ಆಸ್ತಿ ತಂತ್ರಾಂಶದ ಮೂಲಕವೇ ಕಡ್ಡಾಯವಾಗಿ ಇ-ಖಾತಾ ನೀಡಲು 2016ರಲ್ಲಿ ಸುತ್ತೋಲೆ ಹೊರಡಿಸಲಾಗಿದೆ. ಅದರಂತೆ ರಾಜ್ಯದ 320 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈವರೆಗೆ ಆಸ್ತಿ ಮಾಲೀಕರು ಇ-ಆಸ್ತಿ ತಂತ್ರಾಂಶದ ಮೂಲಕ ಅಂದಾಜು 29 ಲಕ್ಷ ಇ ಆಸ್ತಿಗಳಿಗೆ ಇ-ಖಾತಾ ಪಡೆದಿರುತ್ತಾರೆ ಎಂದು ತಿಳಿಸಿದರು. ಈ ಅಭಿಯಾನದ ಮುಂದುವರೆದ ಭಾಗವಾಗಿ ಇ-ಆಸ್ತಿ ತಂತ್ರಾಂಶವನ್ನು ಸರಳೀಕರಣಗೊಳಿಸಲಾಗಿದೆ. ಆಸ್ತಿ ಮಾಲೀಕರು ಯಾವುದೇ ಮಧ್ಯೆವರ್ತಿಗಳಿಲ್ಲದೇ ಹಾಗೂ ಯಾವುದೇ ಅಧಿಕಾರಿ ಸಿಬ್ಬಂದಿಯನ್ನು ಸಂಪರ್ಕಿಸದೇ ತಮ್ಮ ಮನೆಯಲ್ಲಿ ಕುಳಿತು ಸರಳವಾಗಿ ಸುಲಭವಾಗಿ ಇ-ಖಾತಾ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಮಾತನಾಡಿ, ಆಸ್ತಿ ಕಣಜದಲ್ಲಿನ ಮಾಹಿತಿ ಆಧಾರದ ಮೇಲೆ ಕರಡು ಇ-ಖಾತಾವನ್ನು ಪ್ರಕಟಿಸಲಾಗಿದೆ. ನಮೂದಿಸಿದ ಮಾಹಿತಿಯ ನಿಖರತೆಯನ್ನು ನಗರ ಸ್ಥಳೀಯ ಸಂಸ್ಥೆಗಳು ಪರಿಶೀಲಿಸುತ್ತವೆ. ಅಂತಿಮ ಇ-ಖಾತಾವನ್ನು ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ಪಡೆಯಬಹುದಾಗಿದೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಪೌರ ಕಾರ್ಮಿಕರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಅದರಂತೆ ಈಗಾಗಲೇ ಸಾವಿರಾರು ಫಲಾನುಭವಿಗಳಿಗೆ ಮನೆ ಕೊಡುವ ಕಾರ್ಯ ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ಬಡವರ ಮೇಲಿನ ಕಾಳಜಿಯಿಂದಾಗಿ ಮಾನ್ಯ ಮುಖ್ಯಮಂತ್ರಿಗಳು ಈ ಬಾರಿ ಮತ್ತೆ 180 ಹೊಸ ಇಂದಿರಾ ಕ್ಯಾಂಟಿನ್ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.

ಸಮಾರಂಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಡಾ.ಎಂ.ಬಿ.ಪಾಟೀಲ, ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ, ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರರಾದ ಮಂಗೇಶ ಪವಾರ, ಉಪ ಮಹಾಪೌರರಾದ ವಾಣಿ ಜೋಶಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ತುಷಾರ ಗಿರಿನಾಥ, ಸರ್ಕಾರದ ಕಾರ್ಯದರ್ಶಿ ದೀಪಾ ಚೋಳನ್, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾದ ಪ್ರಭುಲಿಂಗ್ ಕವಳಿಕಟ್ಟಿ, ಮಿಷನ್ ಡೈರೇಕ್ಟರ್ ಡಾ.ಸೆಲ್ವಮನಿ ಆರ್. ಹಾಗೂ ಬೆಳಗಾವಿ ಮಹಾನಗರ ಪಾಲಿಕೆಯ ಸದಸ್ಯರು ಮತ್ತು ಇನ್ನೀತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *