ಮುಖ್ಯ ರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕಿಲ್ಲ ಅವಕಾಶ: ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಎಚ್ಚರಿಕೆ: ಸಿಎಂ ಡಿ.ಕೆ.ಶಿವಕುಮಾರ್

Letest Post ಬೆಳಗಾವಿ ರಾಜ್ಯ

ಬೆಳಗಾವಿ: ರಾಜಧಾನಿ ಬೆಂಗಳೂರಿನ ಸಾರ್ವಜನಿಕರ ಸುಗಮ ಸಂಚಾರ ಹಾಗೂ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಬೀದಿ ಬದಿಯ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಸ್ತೆಬದಿ ವ್ಯಾಪಾರಿಗಳ ಪುನರ್ವಸತಿ ಮತ್ತು ನಗರದ ಸೌಂದರ್ಯೀಕರಣದ ಕುರಿತು ಸರ್ಕಾರದ ನಿಲುವನ್ನು ಕಡಕ್ ಆಗಿ ತಿಳಿಸಿದರು.

ಸರ್ವಪಕ್ಷ ಶಾಸಕರ ಒಮ್ಮತದ ಅಭಿಪ್ರಾಯ: ತಾವು ಈ ಹಿಂದೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಅವಧಿಯನ್ನು ಸ್ಮರಿಸಿದ ಡಿಸಿಎಂ, “ನಾನು ಬೆಂಗಳೂರು ಮಿನಿಸ್ಟರ್ ಆಗಿದ್ದಾಗ ನಗರದ ವ್ಯಾಪ್ತಿಯ ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲಾ ಶಾಸಕರನ್ನು ಪ್ರತ್ಯೇಕವಾಗಿ ಕರೆಯಿಸಿ ಬೀದಿ ವ್ಯಾಪಾರಿಗಳ ಸಮಸ್ಯೆ ಹಾಗೂ ಸಾರ್ವಜನಿಕರಿಗಾಗುತ್ತಿರುವ ತೊಂದರೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದೆ. ರಸ್ತೆಗಳ ಮೇಲಿನ ಅತಿಕ್ರಮಣದಿಂದ ಭಾರಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿರುವುದರಿಂದ, ಅವರನ್ನು ಮುಖ್ಯ ರಸ್ತೆಗಳಿಂದ ತೆರವುಗೊಳಿಸುವುದು ಎಲ್ಲ ಶಾಸಕರ ಒಮ್ಮತದ ಅಭಿಪ್ರಾಯವಾಗಿತ್ತು. ಹೀಗಾಗಿ ಅವರನ್ನು ಮುಖ್ಯ ರಸ್ತೆ ಬಿಟ್ಟು ಪರ್ಯಾಯ ಜಾಗದಲ್ಲಿ ವ್ಯಾಪಾರ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು” ಎಂದರು.

ನೋಂದಣಿ ಮತ್ತು ಸುಪ್ರೀಂ ಕೋರ್ಟ್ ಆದೇಶ: ನಗರದಲ್ಲಿ ಅಂದಾಜು 60,000 ಕ್ಕೂ ಹೆಚ್ಚು ಬೀದಿ ವ್ಯಾಪಾರಿಗಳಿದ್ದರೂ, ಈವರೆಗೆ ಕೇವಲ 30,000 ಜನ ಮಾತ್ರ ಅಧಿಕೃತವಾಗಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ ಅವರು, “ನಾವು ಯಾರಿಗೂ ಜೀವನೋಪಾಯಕ್ಕೆ ತೊಂದರೆ ಮಾಡುತ್ತಿಲ್ಲ. ಆದರೆ ಮುಖ್ಯ ರಸ್ತೆಗಳಲ್ಲಿ ಅಂಗಡಿಗಳನ್ನು ಇಡಲು ಸುಪ್ರೀಂ ಕೋರ್ಟ್ ಸಹ ಅನುಮತಿ ನೀಡಿಲ್ಲ ಎಂಬುದನ್ನು ಎಲ್ಲರೂ ನೆನಪಿಡಬೇಕು. ಸಚಿವ ಕೃಷ್ಣಬೈರೇಗೌಡರು ಈ ನಿಟ್ಟಿನಲ್ಲಿ ಮಹತ್ವದ ಕಾರ್ಯರೂಪದ ಕೆಲಸಗಳನ್ನು ಮಾಡಿದ್ದಾರೆ. ಈ ಜವಾಬ್ದಾರಿಯನ್ನು ಅವರೊಬ್ಬರ ಮೇಲೆಯೇ ಬಿಡುವುದಿಲ್ಲ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನಗರ ಪ್ರದಕ್ಷಿಣೆ (ಸಿಎಂ ರೌಂಡ್ಸ್) ಕಾರ್ಯಕ್ರಮವಿದ್ದು, ಇದರ ಬೆನ್ನಲ್ಲೇ ಪೊಲೀಸ್ ಉನ್ನತಾಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆ ಮತ್ತೊಂದು ಮಹತ್ವದ ಸಭೆ ನಡೆಸಿ ಮುಂದಿನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದೇವೆ. ನಾವು ನಿಗದಿಪಡಿಸಿದ ವಲಯಗಳಲ್ಲಿ ಮಾತ್ರವೇ ವ್ಯಾಪಾರ ನಡೆಸಬೇಕು” ಎಂದು ಸ್ಪಷ್ಟ ನಿರ್ದೇಶನ ನೀಡಿದರು.

ದೇವಸ್ಥಾನಗಳ ಹುಂಡಿ ಭದ್ರತೆಗೆ ಕಟ್ಟುನಿಟ್ಟಿನ ಆದೇಶ: ರಾಜ್ಯದ ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ದೇವಸ್ಥಾನಗಳ ಹುಂಡಿಗಳ ಸುರಕ್ಷತೆಯ ಬಗ್ಗೆ ಸುವರ್ಣ ಸೌಧದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲಾ ದೇವಸ್ಥಾನಗಳ ಕಾಣಿಕೆ ಹುಂಡಿಗಳು ಅತ್ಯಂತ ಸುರಕ್ಷಿತವಾಗಿ ಮತ್ತು ಭದ್ರತೆಯಿಂದ ಇರುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.

ಜಿಬಿಎ ಚುನಾವಣೆ: ಹಸ್ತಕ್ಷೇಪ ಮಾಡಲ್ಲ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಜಿಬಿಎ) ಚುನಾವಣೆ ವಿಳಂಬದ ಕುರಿತು ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, “ಸದ್ಯಕ್ಕೆ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಕೋರ್ಟ್‌ಗೆ ತಿಳಿಸಿದ್ದು, ಮುಂಬರುವ ಆಗಸ್ಟ್ ವರೆಗೆ ಕಾಲಾವಕಾಶ ಕೋರಿದ್ದಾರೆ. ಇದು ಸಂಪೂರ್ಣವಾಗಿ ಅಧಿಕಾರಿಗಳ ಮಟ್ಟದ ಆಡಳಿತಾತ್ಮಕ ಸಮಸ್ಯೆಯಾಗಿದ್ದರಿಂದ ನಾವು ಇದರಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ, ಅದನ್ನು ಅವರಿಗೆ ಬಿಟ್ಟಿದ್ದೇವೆ. ಆದರೆ, ರಾಜಕೀಯವಾಗಿ ಕಾಂಗ್ರೆಸ್ ಪಕ್ಷವು ಜಿಬಿಎ ಚುನಾವಣೆಗೆ ಸಂಪೂರ್ಣವಾಗಿ ಸಜ್ಜಾಗಿದೆ” ಎಂದರು.

ಸಂಪುಟ ವಿಸ್ತರಣೆ ಮತ್ತು ಆರ್‌ಎಸ್‌ಎಸ್ ಸಭೆ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸಚಿವ ಸಂಪುಟ ವಿಸ್ತರಣೆಯ ಒತ್ತಡಗಳ ಕುರಿತು ಮಾತನಾಡಿದ ಅವರು, ಸರ್ಕಾರದ ಮೇಲೆ ಯಾವುದೇ ರೀತಿಯ ಒತ್ತಡಗಳಿಲ್ಲ ಎಂದು ಸ್ಪಷ್ಟಪಡಿಸಿದರು. “ನಮ್ಮ ವರಿಷ್ಠರು ಇವತ್ತು ಅಥವಾ ನಾಳೆ ಬರುತ್ತಾರೆ. ಅವರು ದೆಹಲಿಗೆ ಬಂದ ನಂತರ ಯಾವಾಗ ಬುಲಾವ್ ನೀಡುತ್ತಾರೋ, ಆಗ ನಾನು ದೆಹಲಿಗೆ ತೆರಳಿ ಚರ್ಚಿಸುತ್ತೇನೆ” ಎಂದರು. ಇದೇ ವೇಳೆ ಬೆಳಗಾವಿಯಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್ ಸಭೆಯ ಕುರಿತು ಕೇಳಿದ ಪ್ರಶ್ನೆಗೆ, “ಪತ್ರಿಕೆಗಳ ಮೂಲಕ ಈ ವಿಷಯ ತಿಳಿದುಬಂದಿದ್ದು, ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ಕಾನೂನಿನಲ್ಲಿ ಏನಕ್ಕೆ ಅವಕಾಶವಿದೆಯೋ ಅದು ಮಾತ್ರ ನಡೆಯುತ್ತದೆ. ಕಾನೂನು ಎಲ್ಲರಿಗೂ ಒಂದೇ, ಒಬ್ಬೊಬ್ಬರಿಗೆ ಒಂದೊಂದು ನಿಯಮ ಮಾಡಲು ಸಾಧ್ಯವಿಲ್ಲ” ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಶಾಸಕರ ಒತ್ತಾಯ: ಮೋಡ ಬಿತ್ತನೆ ಪರಿಶೀಲನೆ
ರಾಜ್ಯದ ಹಲವು ಭಾಗಗಳಲ್ಲಿ ಉಂಟಾಗಿರುವ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯನ್ನು ಎದುರಿಸಲು ಮೋಡ ಬಿತ್ತನೆ ಮಾಡುವಂತೆ ಶಾಸಕರಿಂದ ಭಾರಿ ಒತ್ತಡ ಕೇಳಿಬರುತ್ತಿದೆ. ಈ ಕುರಿತು ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, “ಹಲವಾರು ಶಾಸಕರು ಮೋಡ ಬಿತ್ತನೆಗಾಗಿ ತೀವ್ರವಾಗಿ ಒತ್ತಾಯಿಸುತ್ತಿದ್ದಾರೆ. ಈ ವಿಷಯವಾಗಿ ಸರ್ಕಾರದ ಕಾನೂನು ತಜ್ಞರು ಹಾಗೂ ಹಣಕಾಸು ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ತುರ್ತು ಮಾತುಕತೆ ನಡೆಸಿ, ಸಾಧಕ-ಬಾಧಕಗಳನ್ನು ಪರಿಶೀಲಿಸಿ ಮುಂದಿನ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *