ಖಾಸಗಿ ಹೋಟೆಲ್‌ನಲ್ಲಿ ಶಾಸಕರಿಗೆ ಸಿಎಂ ಡಿಕೆಶಿ ಔತಣಕೂಟ: ಸ್ಥಳೀಯ ನಾಯಕರ ವಿಶ್ವಾಸಗಳಿಸಲು ಮುಂದಾದ ಮುಖ್ಯಮಂತ್ರಿ.

Letest Post ಬೆಳಗಾವಿ ರಾಜಕೀಯ

ಬೆಳಗಾವಿ: ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಕುಂದಾನಗರಿ ಬೆಳಗಾವಿಗೆ ಆಗಮಿಸಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ನಗರದ ಪ್ರತಿಷ್ಠಿತ ಖಾಸಗಿ ಹೋಟೆಲ್‌ನಲ್ಲಿ ಮುಖ್ಯಮಂತ್ರಿಗಳು ಕಾಂಗ್ರೆಸ್ ಶಾಸಕರು ಹಾಗೂ ಪ್ರಮುಖ ನಾಯಕರಿಗಾಗಿ ವಿಶೇಷ ‘ಡಿನ್ನರ್ ಮೀಟಿಂಗ್’ (ಔತಣಕೂಟ) ಆಯೋಜಿಸಿದ್ದರು.

ಉಸ್ತುವಾರಿ ಸಚಿವರು ಸೇರಿ ಪ್ರಮುಖ ನಾಯಕರ ಭಾಗಿ

ಈ ಹೈಪ್ರೊಫೈಲ್ ಡಿನ್ನರ್ ಮೀಟಿಂಗ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಜಿಲ್ಲೆಯ ಹಾಗೂ ನೆರೆಯ ಭಾಗದ ಹಲವು ಪ್ರಮುಖ ಶಾಸಕರು ಮತ್ತು ಹಿರಿಯ ನಾಯಕರು ಭಾಗವಹಿಸಿದ್ದರು.
ಔತಣಕೂಟದಲ್ಲಿ ಭಾಗಿಯಾದ ಪ್ರಮುಖರು:

  • ಶಾಸಕರಾದ ರಾಜು ಕಾಗೆ, ಮಹಾಂತೇಶ ಕೌಜಲಗಿ, ವಿಶ್ವಾಸ ವೈದ್ಯ.
  • ಶಾಸಕರಾದ ಪ್ರಸಾದ್ ಅಬ್ಬಯ್ಯ, ಶ್ರೀನಿವಾಸ ಮಾನೆ, ಯಾಸೀರ್ ಖಾನ ಪಠಾಣ್.
  • ಶಾಸಕ ಅಶೋಕ ಪಟ್ಟಣ್ ಮತ್ತು ಬಾಬಾಸಾಹೇಬ್ ಪಾಟೀಲ್.
  • ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್.
  • ವಿಧಾನ ಪರಿಷತ್ ಸದಸ್ಯ (MLC) ಚನ್ನರಾಜ್ ಹಟ್ಟಿಹೊಳಿ.
  • ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ.

ಮೊದಲ ಭೇಟಿಯಲ್ಲೇ ಶಾಸಕರ ವಿಶ್ವಾಸಕ್ಕೆ ಮುಂದಾದ ಸಿಎಂ

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಮೇಲೆ ಬೆಳಗಾವಿಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದ್ದು, ರಾಜಕೀಯವಾಗಿ ಈ ಔತಣಕೂಟ ತೀವ್ರ ಕುತೂಹಲ ಕೆರಳಿಸಿದೆ. ಜಿಲ್ಲೆಯ ಶಾಸಕರು ಹಾಗೂ ನಾಯಕರೊಂದಿಗೆ ಮುಕ್ತವಾಗಿ ಸಂವಾದ ನಡೆಸಿ, ಅವರ ಅಹವಾಲುಗಳನ್ನು ಆಲಿಸುವ ಮತ್ತು ಮುಂಬರುವ ದಿನಗಳಲ್ಲಿ ಸರ್ಕಾರದ ಆಡಳಿತಕ್ಕೆ ಎಲ್ಲರನ್ನೂ ಒಗ್ಗಟ್ಟಿನಿಂದ ಕೊಂಡೊಯ್ಯುವ ನಿಟ್ಟಿನಲ್ಲಿ ಸಿಎಂ ಈ ಆಪ್ತ ಸಭೆ ನಡೆಸಿದ್ದಾರೆ ಎನ್ನಲಾಗಿದೆ.

ರಾತ್ರಿ ಭೋಜನ ಸವಿಯುತ್ತಲೇ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು, ಪಕ್ಷದ ಸಂಘಟನೆ ಹಾಗೂ ಸ್ಥಳೀಯ ರಾಜಕೀಯ ವಿದ್ಯಮಾನಗಳ ಕುರಿತು ನಾಯಕರೊಂದಿಗೆ ಮುಖ್ಯಮಂತ್ರಿಗಳು ಸುದೀರ್ಘ ಚರ್ಚೆ ನಡೆಸಿದ್ದು, ಶಾಸಕರನ್ನು ಪೂರ್ಣ ಪ್ರಮಾಣದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *