ಬರಗಾಲದ ಭೀತಿ ದೂರ, ರಾಜ್ಯಾದ್ಯಂತ ಹರ್ಷ: ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಆಶಾವಾದ

Letest Post ಬೆಳಗಾವಿ ರಾಜ್ಯ

ಬೆಳಗಾವಿ: “ರಾಜ್ಯದಲ್ಲಿ ಭೀಕರ ಬರಗಾಲ ಆವರಿಸುವ ಹಾಗೂ ಕುಡಿಯುವ ನೀರಿಗೆ ತೀವ್ರ ತತ್ವಾರ ಉಂಟಾಗುವ ಭೀತಿ ಎದುರಾಗಿತ್ತು. ಆದರೆ ಕಳೆದ ಎರಡೂಮೂರು ದಿನಗಳಿಂದ ಮಳೆ ತನ್ನ ದಿಕ್ಕನ್ನು ಬದಲಾಯಿಸಿದ್ದು, ಕರ್ನಾಟಕದಲ್ಲಿ ಸದ್ಯ ಸಂತೋಷದ ವಾತಾವರಣ ನಿರ್ಮಾಣವಾಗಿದೆ” ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಳೆ ಪರಿಸ್ಥಿತಿ, ಜಲಾಶಯಗಳ ಸ್ಥಿತಿಗತಿ, ಮೋಡ ಬಿತ್ತನೆ ಹಾಗೂ ಆರ್‌ಎಸ್‌ಎಸ್ ಬೈಠಕ್ ಸೇರಿದಂತೆ ಹಲವು ಪ್ರಮುಖ ವಿದ್ಯಮಾನಗಳ ಕುರಿತು  ಮಾಹಿತಿ ಹಂಚಿಕೊಂಡರು.

ನದಿಗಳು ಪ್ರವಾಹೋಪಾದಿ: ಬಾಗಲಕೋಟೆವರೆಗೂ ತಲುಪಿದ ನೀರು

“ರಾಜ್ಯದ ಪ್ರಮುಖ ಜಲಾಶಯಗಳಿಗೆ ಸದ್ಯ ನೀರು ಹರಿದುಬರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ನೀರು ಬರಬೇಕಿದೆ. ಕೃಷ್ಣಾ, ಮಲಪ್ರಭಾ ಹಾಗೂ ಹಿರಣ್ಯಕೇಶಿ ನದಿಗಳಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಕಾಲುವೆಗಳಿಗೆ ನೀರು ಬಿಡಬೇಕಾಗಿದ್ದ ಹಿನ್ನೆಲೆಯಲ್ಲಿ ನಾನೇ ಖುದ್ದಾಗಿ ದೂಪದಾಳ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆ. ಸದ್ಯ ಬಾಗಲಕೋಟೆಯವರೆಗೂ ನೀರು ತಲುಪಿದ್ದು, ಆ ಭಾಗದ ರೈತರು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಇನ್ನು ನಾಲ್ಕೈದು ದಿನಗಳ ಕಾಲ ಮಳೆ ಮುಂದುವರಿಯುವ ಅಂದಾಜಿದೆ” ಎಂದು ಸಚಿವರು ವಿವರಿಸಿದರು.‌ ಚಿಕ್ಕೋಡಿ ಭಾಗದಲ್ಲಿ ಸಂಪರ್ಕ ಸೇತುವೆಗಳು ಮುಳುಗಡೆಯಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಸೇತುವೆ ಮುಳುಗಡೆ ಪ್ರತಿ ಬಾರಿ ಮಳೆ ಬಂದಾಗಲೂ ಆಗುವಂತದ್ದೇ, ಇದೇನು ಹೊಸದಲ್ಲ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಈಗಾಗಲೇ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ” ಎಂದು ತಿಳಿಸಿದರು.

ರಾಜ್ಯಾದ್ಯಂತ ‘ಮೋಡ ಬಿತ್ತನೆ’ಗೆ ಸಿಎಂಗೆ ಒತ್ತಾಯ

ಹಾವೇರಿ ಜಿಲ್ಲೆಯಲ್ಲಿ ಕೈಗೊಳ್ಳಲಾದ ಮೋಡ ಬಿತ್ತನೆ ಪ್ರಯೋಗ ಯಶಸ್ವಿಯಾಗಿದೆ ಎಂದ ಸಚಿವರು, “ಹಾವೇರಿಯಲ್ಲಿ ಮೋಡ ಬಿತ್ತನೆಯಿಂದಾಗಿ ಹೆಚ್ಚಿನ ಮಳೆಯಾಗಿದೆ ಎಂದು ಸಾರ್ವಜನಿಕರೇ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಮುಂಬರುವ ದಿನಗಳಲ್ಲಿ ರಾಜ್ಯದ ಇತರೆ ಅಗತ್ಯವಿರುವ ಭಾಗಗಳಲ್ಲೂ ಮೋಡ ಬಿತ್ತನೆ ಕಾರ್ಯವನ್ನು ಹಮ್ಮಿಕೊಳ್ಳುವಂತೆ ಮುಖ್ಯಮಂತ್ರಿ ಅವರಿಗೆ ಒತ್ತಾಯಿಸಲಾಗುವುದು” ಎಂದರು. ಇದೇ ವೇಳೆ ತೀವ್ರ ಕುತೂಹಲ ಕೆರಳಿಸಿರುವ ಸಚಿವ ಸಂಪುಟ ವಿಸ್ತರಣೆ ಕುರಿತು ಉತ್ತರಿಸಿ, “ಸಂಪುಟ ವಿಸ್ತರಣೆ ಆದಷ್ಟು ಬೇಗ ಆಗಬೇಕೆಂದು ನಾವು ಈಗಾಗಲೇ ಹೇಳಿದ್ದೇವೆ. ಶೀಘ್ರದಲ್ಲೇ ಆಗುವ ನಿರೀಕ್ಷೆಯೂ ಇದೆ, ಅಲ್ಲಿಯವರೆಗೆ ಕಾಯೋಣ” ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಆರ್‌ಎಸ್‌ಎಸ್ ಬೈಠಕ್: ಸರ್ಕಾರದಿಂದ ಸಂಪೂರ್ಣ ವ್ಯವಸ್ಥೆ

ಬೆಳಗಾವಿಯಲ್ಲಿ ಆಯೋಜನೆಗೊಂಡಿರುವ ಆರ್‌ಎಸ್‌ಎಸ್ ಬೈಠಕ್ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಅವರು ಕಾರ್ಯಕ್ರಮ ಮಾಡಲಿ, ಅದಕ್ಕೇನೂ ತೊಂದರೆಯಿಲ್ಲ. ಆರ್‌ಎಸ್‌ಎಸ್‌ನವರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮಾಡಿಕೊಟ್ಟಿದೆ. ರಾಜ್ಯ ಸರ್ಕಾರದಿಂದ ಆಗಬೇಕಾದ ಎಲ್ಲಾ ಕಾನೂನಾತ್ಮಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಅವರು ಯಾವ ಕಾರ್ಯಕ್ರಮ ಮಾಡುತ್ತಾರೆ, ಹೇಗೆ ಮಾಡುತ್ತಾರೆ ಎಂಬುದು ಅವರಿಗೆ ಬಿಟ್ಟ ವಿಚಾರ” ಎಂದರು.

ರಾಜಕೀಯದ ದೂರದ ಮಾತು:
“ಈ ಸಭೆಯಲ್ಲಿ ರಾಜಕೀಯ ಅಜೆಂಡಾ ಏನಾದರೂ ಇದೆಯೇ? ಎಂಬ ಪ್ರಶ್ನೆಗೆ, ‘ತಾವು ರಾಜಕೀಯದಿಂದ ದೂರ ಇರುವುದಾಗಿ ಅವರೇ ಯಾವಾಗಲೂ ಹೇಳುತ್ತಾರೆ, ನಾವು ಅದನ್ನೇ ಕೇಳಿದ್ದೇವೆ’ ಎಂದು ಸಚಿವರು ಚುಟುಕಾಗಿ ಉತ್ತರಿಸಿದರು.”

ಪ್ರಿಯಾಂಕ್ ಖರ್ಗೆ ಹೇಳಿಕೆ ಅವರ ಇಲಾಖೆಗೆ ಸಂಬಂಧಿಸಿದ್ದು

“ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಲು ಕರ್ನಾಟಕದಲ್ಲೇ ಆರ್‌ಎಸ್‌ಎಸ್ ಬೈಠಕ್ ನಡೆಸಲಾಗುತ್ತಿದೆ ಎಂಬ ಚರ್ಚೆಗಳ ಕುರಿತು ನನಗೆ ಗೊತ್ತಿಲ್ಲ. ಇದು ಪ್ರಿಯಾಂಕ್ ಖರ್ಗೆ ಅವರಿಗೆ ಸಂಬಂಧಪಟ್ಟ ವಿಚಾರ. ಇನ್ನು ಆರ್‌ಎಸ್‌ಎಸ್ ಪಥಸಂಚಲನಕ್ಕೆ ಪೊಲೀಸರ ಅನುಮತಿ ಕಡ್ಡಾಯ ಎಂಬ ಖರ್ಗೆ ಅವರ ಹೇಳಿಕೆ ಅವರ ಇಲಾಖೆಗೆ ಸಂಬಂಧಿಸಿದ್ದು. ಯಾವ ರೀತಿ ಅನುಮತಿ ಪಡೆಯಬೇಕು, ನಿಯಮಗಳು ಹೇಗಿರಬೇಕು ಎಂಬುದನ್ನು ಅವರೇ ನೋಡಿಕೊಳ್ಳುತ್ತಾರೆ. ನಮ್ಮ ಗೃಹ ಸಚಿವರಿದ್ದಾರೆ, ಇಡೀ ಪ್ರಕ್ರಿಯೆಯನ್ನು ಅವರೇ ಸಮರ್ಥವಾಗಿ ಹ್ಯಾಂಡಲ್ ಮಾಡುತ್ತಾರೆ” ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *