ಬೆಳಗಾವಿ: ವಿವಾಹಿತ ಮಹಿಳೆಯನ್ನು ಕರೆದೊಯ್ದ ಯುವಕನ ಮನೆ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಬೆಳಗಾವಿಯ ಮಾರಿಹಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಂಧಿತರನ್ನು ನಾಗರಾಜ್ ನಾಯಕ, ರವಿ ಬೀಜಗತ್ತಿ ಹಾಗೂ ಈಶ್ವರ ಮುಚ್ಚಂಡಿ ಎಂದು ಗುರುತಿಸಲಾಗಿದೆ. ಬಂಧಿತ ಮೂವರೂ ಆರೋಪಿಗಳು ವಿವಾಹಿತ ಮಹಿಳೆ ನಾಗವ್ವ ಹಾಗೂ ಆಕೆಯ ಪತಿ ಬಸಪ್ಪನ ಸಂಬಂಧಿಕರು ಎಂದು ತಿಳಿದುಬಂದಿದೆ.
ಘಟನೆಯ ಹಿನ್ನೆಲೆ:
ಗ್ರಾಮದ ವಿವಾಹಿತೆ ನಾಗವ್ವ ಎಂಬಾಕೆಯನ್ನು ಯಲ್ಲಪ್ಪ ನಾಯಕ್ ಎಂಬ ಯುವಕ ಕರೆದೊಯ್ದಿದ್ದ ಎನ್ನಲಾಗಿದೆ. ಇದರಿಂದ ತೀವ್ರ ಆಕ್ರೋಶಗೊಂಡ ಮಹಿಳೆಯ ಪತಿ ಬಸಪ್ಪನ ಕಡೆಯ ಸಂಬಂಧಿಕರು ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ. ಯಲ್ಲಪ್ಪ ನಾಯಕ್ ಮನೆಗೆ ನುಗ್ಗಿ, ಇಡೀ ಮನೆಯನ್ನು ಧ್ವಂಸಗೊಳಿಸಿ ಆಕ್ರೋಶ ಹೊರಹಾಕಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಆರೋಪಿಗಳ ಬಂಧನ:
ಮನೆಯನ್ನು ಧ್ವಂಸಗೊಳಿಸುತ್ತಿದ್ದಂತೆ ಯಲ್ಲಪ್ಪನ ತಂದೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೂವರು ಪ್ರಮುಖ ಆರೋಪಿಗಳು ಸೇರಿದಂತೆ ಹಲವರ ವಿರುದ್ಧ ಈ ದೂರು ಸಲ್ಲಿಕೆಯಾಗಿತ್ತು. ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಮಾರಿಹಾಳ ಪೊಲೀಸರು, ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ತನಿಖೆ ತೀವ್ರ: ಸದ್ಯ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ಈ ಕುಕೃತ್ಯದಲ್ಲಿ ಭಾಗಿಯಾದ ಇನ್ನುಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಗ್ರಾಮದಲ್ಲಿ ಸದ್ಯ ಪರಿಸ್ಥಿತಿ ಶಾಂತಿಯುತವಾಗಿದೆ.

