ಬೆಳಗಾವಿ: ಇಲ್ಲಿನ ಹೊರವಲಯದಲ್ಲಿರುವ ಪ್ರಸಿದ್ಧ ಹಿಂಡಾಲ್ಕೋ ಕಂಪನಿಯ ಆವರಣದಲ್ಲಿ ಯುವ ಕಾರ್ಮಿಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಗೆಡಿಸುವ ಘಟನೆ ನಡೆದಿದೆ. ಘಟನೆಯ ಬೆನ್ನಲ್ಲೇ ಆಕ್ರೋಶಗೊಂಡ ನೂರಾರು ಜನ ಕಂಪನಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದು, ಸದ್ಯ ಸ್ಥಳದಲ್ಲಿ ತೀವ್ರ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬೆಳಗಾವಿ ತಾಲೂಕಿನ ಮುತ್ತ್ಯಾನಟ್ಟಿ ಗ್ರಾಮದ ನಿವಾಸಿ ಶಂಕರ್ ತಳವಾರ (24) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವಕ. ಈ ಘಟನೆ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ವಾಟ್ಸಾಪ್ ಸ್ಟೇಟಸ್‌ನಲ್ಲಿ ಡೆತ್‌ನೋಟ್! ಅಸಲಿ ಕಾರಣವೇನು?
ಯುವಕ ಶಂಕರ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ವಾಟ್ಸಾಪ್‌ನಲ್ಲಿ ಡೆತ್‌ನೋಟ್ ಒಂದನ್ನು ಸ್ಟೇಟಸ್ ಆಗಿ ಹಾಕಿಕೊಂಡಿದ್ದ ಎನ್ನಲಾಗಿದೆ. ಕಂಪನಿಯಲ್ಲಿ ಹಳೇ ಕಾರ್ಮಿಕರನ್ನು ತೆಗೆದು ಹೊಸ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಗುತ್ತಿಗೆದಾರ ಪೈಯಾಲ್ ನಂದಿ ಎಂಬುವವರಿಂದ ತನಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಶಂಕರ್ ಆರೋಪಿಸಿದ್ದಾನೆ.
ಲಂಚದ ಬೇಡಿಕೆ: “ಕೆಲಸ ಮುಂದುವರೆಸಬೇಕಾದರೆ 5 ಲಕ್ಷ ರೂಪಾಯಿ ಹಣ ನೀಡಬೇಕು” ಎಂದು ಗುತ್ತಿಗೆದಾರ ಡಿಮ್ಯಾಂಡ್ ಮಾಡಿದ್ದ ಎನ್ನಲಾಗಿದೆ. ಬಡ ಕುಟುಂಬದ ಶಂಕರ್‌ನಿಗೆ ಅಷ್ಟೊಂದು ದೊಡ್ಡ ಮೊತ್ತದ ಹಣ ನೀಡಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಕೈಯಲ್ಲಿದ್ದ ಕೆಲಸವೂ ಕೈತಪ್ಪಿ ಹೋಗುತ್ತದೆ ಎಂಬ ಆತಂಕ ಹಾಗೂ ತೀವ್ರ ಮನಸ್ತಾಪಕ್ಕೆ ಒಳಗಾಗಿದ್ದ ಶಂಕರ್, ಅಂತಿಮವಾಗಿ ನೇಣಿಗೆ ಶರಣಾಗಿದ್ದಾನೆ.
ಭುಗಿಲೆದ್ದ ಆಕ್ರೋಶ: ಕಂಪನಿ ಮೇಲೆ ಕಲ್ಲು ತೂರಾಟ
ಶಂಕರ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮುತ್ತ್ಯಾನಟ್ಟಿ ಗ್ರಾಮಸ್ಥರು, ಮೃತನ ಸ್ನೇಹಿತರು ಹಾಗೂ ನೂರಾರು ಸಂಖ್ಯೆಯ ಸಂಬಂಧಿಕರು ಹಿಂಡಾಲ್ಕೋ ಕಂಪನಿ ಎದುರು ಜಮಾಯಿಸಿದರು. ಗುತ್ತಿಗೆದಾರನ ವಿರುದ್ಧ ಹಾಗೂ ಕಂಪನಿ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಸಾರ್ವಜನಿಕರು, ಕಂಪನಿಯ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದರು. ಕಲ್ಲು ತೂರಾಟದ ಭರದಲ್ಲಿ ಕಂಪನಿಯ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದು, ಪರಿಸ್ಥಿತಿ ಕೈಮೀರುವ ಮುನ್ಸೂಚನೆ ಸಿಕ್ಕಿತು.
ಸ್ಥಳಕ್ಕೆ ಧಾವಿಸಿದ ಕಮಿಷನರ್, ಶಾಸಕರು ಮತ್ತು ಡಿಸಿ
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಹಾಗೂ ಸ್ಥಳೀಯ ಶಾಸಕ ಆಸೀಫ್ ಸೇಠ್ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಆದರೆ, ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಮೃತನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಕುಟುಂಬಸ್ಥರು ಪಟ್ಟು ಹಿಡಿದರು. ಬಳಿಕ ಸ್ಥಳಕ್ಕೆ ಜಿಲ್ಲಾಧಿಕಾರಿ (ಡಿಸಿ) ಮೊಹಮ್ಮದ್ ರೋಷನ್ ಅವರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತನ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸಂಬಂಧಿಕರು ಒತ್ತಾಯಿಸಿದ ಹಿನ್ನೆಲೆಯಲ್ಲಿ, ಹೆಚ್ಚಿನ ಪರಿಹಾರ ನೀಡುವ ಕುರಿತು ಜಿಲ್ಲಾಧಿಕಾರಿಗಳು ಹಿಂಡಾಲ್ಕೋ ಕಂಪನಿಯ ಉನ್ನತ ಅಧಿಕಾರಿಗಳ ಜೊತೆಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ನೂರಕ್ಕೂ ಹೆಚ್ಚು ಪೊಲೀಸರ ನಿಯೋಜನೆ: ಹೈ ಅಲರ್ಟ್
ಸದ್ಯ ಹಿಂಡಾಲ್ಕೋ ಕಂಪನಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಾತಾವರಣ ತೀವ್ರ ಉದ್ವಿಗ್ನಗೊಂಡಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಮಾಳಮಾರುತಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಗುತ್ತಿಗೆದಾರನ ಕಿರುಕುಳದ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದೆ.