ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಸ್ಥಳದಲ್ಲೇ ಓರ್ವ ಸಾವು: ಇಬ್ಬರು ಯುವಕರಿಗೆ ಗಂಭೀರ ಗಾಯ

Letest Post ರಾಜ್ಯ
ಭೀಕರ ಅಪಘಾತದ ದೃಶ್ಯಾವಳಿ

ಗದಗ: ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ನಡೆದ ಈ ಭೀಕರ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ದುರ್ಮರಣಕ್ಕಿಡಾಗಿದ್ದರೆ, ಇನ್ನುಳಿದ ಇಬ್ಬರು ಯುವಕರಿಗೆ ಗಂಭೀರ ಗಾಯಗಳಾಗಿವೆ.

ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ಈ ಘಟನೆ ನಡೆದಿದ್ದು, ಕಾರು ಚಾಲನೆ ಮಾಡ್ತಿದ್ದ ಜೀತೇಂದ್ರ (23) ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿ. ಉಳಿದಂತೆ ಪವನ್ (32), ವೆಂಕಟೇಶ (33) ಹೆಸರಿನ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು 108 ಅಂಬುಲೆನ್ಸ್ ಮೂಲಕ ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಿ, ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಈ ಮೂವರು ಯುವಕರು ಬಳ್ಳಾರಿಯಿಂದ ದಾಂಡೇಲಿಗೆ ಹೊರಟಿದ್ದರು ಎನ್ನಲಾಗಿದ್ದು, ಅತೀ ವೇಗವಾಗಿ ಕಾರು ಚಲಾಯಿಸುವಾಗ ಕಾರು ನಿಯಂತ್ರಣಕ್ಕೆ ಸಿಗದೆ ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಘಟನೆ ನಡೆದ ಕೂಡಲೇ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *