ದಿನೇ ದಿನೇ ಬಿಗಡಾಯುಸುತ್ತಿದೆ ಸರ್ಕಾರಿ ಉದ್ಯೋಗದ ಸಮಸ್ಯೆ – ಸರ್ಕಾರ ನೀಡುವುದೇ ಭರವಸೆ?

Letest Post ಧಾರವಾಡ ರಾಜ್ಯ

‘ಕಣ್ಣು ಬಿಡು ಸರ್ಕಾರ’

ಧಾರವಾಡ: ಎಲ್ಲೆಡೆ ಉದ್ಯೋಗಾಕಾಂಕ್ಷಿಗಳ ಆಕ್ರೋಶ. ಮತ್ತೊಂದೆಡೆ ಸರ್ಕಾರಿ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿಕೊಳ್ಳುತ್ತಿಲ್ಲ ಎಂಬ ಉದ್ಯೋಗಾಕಾಂಕ್ಷಿಗಳ ಹತಾಶ ಭಾವನೆ. ಪೊಲೀಸ್ ಆಯುಕ್ತರ ಎದುರೇ ಕಣ್ಣೀರು ಹಾಕುತ್ತಿರುವ ಉದ್ಯೋಗಾಕಾಂಕ್ಷಿಗಳು. ಇದೆಲ್ಲ ಸದ್ಯದ ಉದ್ಯೋಗಾಕಾಂಕ್ಷಿಗಳ ಪರಿಸ್ಥಿತಿ.

ಪೊಲೀಸ್ ಕಮೀಶನರ್ ಮುಂದೆ ಮಹಿಳಾ ಉದ್ಯೋಗಾಂಕ್ಷಿ ಕಣ್ಣಿರು

ಒಂದೆಡೆ ವಯಸ್ಸು ಮೀರುತ್ತಿದ್ದರೆ, ಮತ್ತೊಂದೆಡೆ ಸರ್ಕಾರ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮೊಂಡುತನ ತೋರಿಸುತ್ತಿದೆ. ಧಾರವಾಡ ಅದೆಷ್ಟೋ ಉದ್ಯೋಗಾಕಾಂಕ್ಷಿಗಳಿಗೆ ನೆಲೆ ಕೊಟ್ಟಿದೆ. ಆದರೆ, ಅವರಿಗಿರುವ ಕಳವಳ ಏನೆಂದರೆ ಸರ್ಕಾರ ಅದ್ಯಾವಾಗ ಉದ್ಯೋಗಕ್ಕೆ ಅರ್ಜಿ ಕರೆಯುತ್ತದೆಯೋ ನಾವು ಯಾವಾಗ ಬಡತನದಿಂದ ಮುಕ್ತವಾಗುತ್ತೇವೋ ಅದ್ಯಾವಾಗ ಸರ್ಕಾರಿ ಕೆಲಸ ಪಡೆದು ಮರಳಿ ನಮ್ಮೂರಿಗೆ ಹೋಗುತ್ತೇವೋ ಎಂಬುದು.

ಕೇವಲ ಒಂದೇ ಒಂದು ಬಾರಿ ಉದ್ಯೋಗಾಕಾಂಕ್ಷಿಗಳು ಧಾರವಾಡದಲ್ಲಿ ನಡೆಸಿದ ಪ್ರತಿಭಟನೆ ಇಡೀ ರಾಜ್ಯದ ಗಮನಸೆಳೆಯುವುದರ ಜೊತೆಗೆ ಸರ್ಕಾರಕ್ಕೆ ಮುಜುಗರವನ್ನೂ ತಂದಿಟ್ಟಿತ್ತು. ಮತ್ತೆ ಉದ್ಯೋಗಾಕಾಂಕ್ಷಿಗಳು ಸಂಘಟಿತ ಹೋರಾಟಕ್ಕೆ ಮುಂದಾದರೆ ಇದು ಸರ್ಕಾರದ ಮೇಲೆ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೋ ಏನೋ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಪರವಾನಿಗಿಯೇ ಸಿಗುತ್ತಿಲ್ಲ.

ಸೋಮವಾರ ಕೂಡ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಇತ್ತು. ಈ ಪ್ರತಿಭಟನೆಗೆ ಅವಕಾಶ ನೀಡದೇ ಇದ್ದರೂ ಪೊಲೀಸ್ ಇಲಾಖೆ ಮಾತ್ರ ಕಟ್ಟೆಚ್ಚರ ವಹಿಸಿತ್ತು. ಧಾರವಾಡದ ಸಪ್ತಾಪುರದಿಂದ ಹಿಡಿದು ಮುಂದೆ ಶ್ರೀನಗರದವರೆಗೂ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆಯನ್ನೇ ಬಂದ್ ಮಾಡಿದ್ದರು. ಧಾರವಾಡದ ಜಯನಗರ, ಶ್ರೀನಗರ, ಸಪ್ತಾಪುರ ಸೇರಿದಂತೆ ಇತರ ಪ್ರದೇಶಗಳಿಗೆ ಸ್ವತಃ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಎಸ್‌ಪಿ ಗುಂಜನ್ ಆರ್ಯ, ಡಿಸಿಪಿ ಮಹಾನಿಂಗ ನಂದಗಾವಿ ಜಂಟಿಯಾಗೇ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡದಿದ್ದರೇನಂತೆ ನಮ್ಮ ಆಕ್ರೋಶ ಸರ್ಕಾರದ ಮೇಲೆ ಸದಾ ಇದ್ದೇ ಇದೆ. ಬೆಳಗಾವಿ ಸುವರ್ಣಸೌಧಕ್ಕಾದರೂ ನಾವು ಮುತ್ತಿಗೆ ಹಾಕಿ ನಮ್ಮ ಹಕ್ಕು ಕೇಳುತ್ತೇವೆ. ಸರ್ಕಾರ ತಾನು ಮಾಡುವ ಕೆಲಸ ಮಾಡಿದರೆ ಪ್ರತಿಭಟನೆ ಮಾಡುವ ಅವಶ್ಯಕತೆಯಾದರೂ ನಮಗೇನಿದೆ ಎಂದು ಉದ್ಯೋಗಾಕಾಂಕ್ಷಿಗಳು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಸಪ್ತಾಪುರ, ಜಯನಗರ, ಶ್ರೀನಗರಗಳಲ್ಲಿ ಸುತ್ತಾಡಿದ ಪೊಲೀಸ್ ಆಯುಕ್ತರು ಅನೇಕ ಉದ್ಯೋಗಾಕಾಂಕ್ಷಿಗಳನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿದರು. ಅಲ್ಲದೇ ಅವರಿಗೆ ಧೈರ್ಯ ತುಂಬವ ಕೆಲಸ ಕೂಡ ಮಾಡಿದರು. ಆದರೆ, ತಮ್ಮ ಬೇಡಿಕೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂಬುದನ್ನೇ ಉದ್ಯೋಗಾಕಾಂಕ್ಷಿಗಳು ಒತ್ತಿ ಒತ್ತಿ ಹೇಳಿದರು. ಏನೇ ಆಗಲಿ ಸರ್ಕಾರ ಇವರ ಬೇಡಿಕೆಯತ್ತ ಗಮನಹರಿಸಿ ಕ್ರಮ ಕೈಗೊಳ್ಳುತ್ತಾ ಎಂಬ ಪ್ರಶ್ನೆಗೆ ಉತ್ತರ ಮಾತ್ರ ಸಿಗಬೇಕಿದೆ.

Leave a Reply

Your email address will not be published. Required fields are marked *