ಹುಬ್ಬಳ್ಳಿ: ಬೆಳಗಾವಿ ಅಧಿವೇಶನವು ಪ್ರತಿಭಟನೆಯ ವೇದಿಕೆ, ಪಿಕ್‌ನಿಕ್ ಎಂಬ ಭಾವದಿಂದ ನಡೆದುಕೊಳ್ಳುವುದು ಸರಿಯಲ್ಲ. ಅಧಿವೇಶನದ ಪಾವಿತ್ರ್ಯ ಮತ್ತು ಶಕ್ತಿಯನ್ನು ಕುಂದಿಸುವ ಕೆಲಸ ಆಗಬಾರದು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ, ಶಾಸಕರು ಮತ್ತು ವಿಪಕ್ಷಗಳಿಗೆ ಕರೆ ನೀಡಿದರು.

ಭಾನುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾದೇಶಿಕ ಅಸಮಾನತೆ ದೂರಮಾಡಲು ಉತ್ತರ ಕರ್ನಾಟಕ ಮತ್ತು ಸಮಗ್ರ ಕರ್ನಾಟಕದ ಅಭಿವೃದ್ಧಿ ಕುರಿತು ಚರ್ಚಿಸುವ ಜವಾಬ್ದಾರಿ ಶಾಸಕರ ಮೇಲಿದೆ ಎಂದರು. ಸಾಮಾಜಿಕ ಬಹಿಷ್ಕಾರ ನಿಷೇಧ, ಧಾರ್ಮಿಕ ಸಂಸ್ಥೆಗಳ ಪರಿಣಾಮಕಾರಿ ನಿರ್ವಹಣೆ, ಹಸ್ತಪ್ರತಿಗಳ ಡಿಜಿಟಲೀಕರಣ, ಚಂದ್ರಗುತತ್ತಿ ಪ್ರಾಧಿಕಾರ ರಚನೆ ಸೇರಿದಂತೆ 20ಕ್ಕೂ ಅಧಿಕ ಮಸೂದೆ ಮಂಡನೆಯಾಗಲಿವೆ ಎಂದು ಮಾಹಿತಿ ನೀಡಿದರು. ಐದು ಗ್ಯಾರಂಟಿಗಳ ಮೂಲಕ ರಾಜ್ಯದಲ್ಲಿ ಬಡತನವನ್ನು ಬೇರು ಸಹಿತ ಕಿತ್ತಿದ್ದೇವೆ. 230ಕ್ಕೂ ಅಧಿಕ ಭರವಸೆ ಈಡೇರಿಸಿದೇವೆ. ವಿರೋಧ ಪಕ್ಷಗಳು ಅವಿಶ್ವಾಸ ಮಂಡನೆ ಮಾಡಲು ಕಾರಣಗಳೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕೇಂದ್ರಕ್ಕೆ ಮಾರ್ಗದರ್ಶನ: ಭದ್ರಾ ಮೇಲ್ದಂಡೆಗೆ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದ ₹5,300 ಕೋಟಿ ಕೊಟ್ಟಿಲ್ಲ, ಜಿಎಸ್‌ಟಿ ಪರಿಷ್ಕರಣೆಯಿಂದಾಗಿ ನಮಗೆ ಅಪಾರ ನಷ್ಟ ಉಂಟಾಗಿದೆ. ಈ ವಿಚಾರಗಳನ್ನೂ ಸದನದಲ್ಲಿ ಚರ್ಚಿಸಿ, ಕೇಂದ್ರ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯದ ವಿಚಾರದಲ್ಲಿ ಕೇಂದ್ರ ಸಚಿವರು ಅನಗತ್ಯ ಆರೋಪ ಮಾಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರವೃತ್ತಿ ತೋರುತ್ತಿದ್ದಾರೆ. ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ದೇಶದಲ್ಲಿ ಕಬ್ಬು, ಜೋಳ ಉತ್ಪಾದನೆ ಆಗುತ್ತಿದ್ದರೂ ಸಕ್ಕರೆ, ಜೋಳ ಆಮದು ಮಾಡಿಕೊಂಡು ರೈತರ ಬದುಕನ್ನು ಕಷ್ಟಕ್ಕೆ ದೂಡುತ್ತಿದೆ. ಕೇಂದ್ರ ಸರ್ಕಾರ ಮಲಗಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ ಎಂದು ಅವರು ಅಸಮಾಧಾನ ಹೊರಹಾಕಿದರು.
ಇಂಡಿಗೊ ವಿಮಾನ ಹಾರಾಟ ಸ್ಥಗಿತದಿಂದಾಗಿ ಪ್ರಯಾಣಿಕರಿಗೆ ತೊಂದರೆ ಆಗಿದೆ. ಈ ಪ್ರಕರಣ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಕೂಡಲೇ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು. ರಾಜಭವನವನ್ನು ಲೋಕಭವನ ಎಂದು ಮರು ನಾಮಕರಣ ಮಾಡುವುದು ಆಡಳಿತಾತ್ಮಕ ದೃಷ್ಟಿಯಿಂದ ಸರಿಯಲ್ಲ. ಇದಕ್ಕೆ ಸಚಿವ ಸಂಪುಟದಲ್ಲಿ ವಿರೋಧ ವ್ಯಕ್ತವಾಗಿದ್ದು, ರಾಜ್ಯ ಸರ್ಕಾರದ ಒಪ್ಪಿಗೆ ಇಲ್ಲ ಎಂದರು.


