ಧಾರವಾಡ: ಜೀವ ನೀರ ಮೇಲಿನ ಗುಳ್ಳೆ ಇದ್ದಂತೆ. ಯಾವಾಗ ಬೇಕಾದರೂ ಏನಾದರೂ ಆಗಬಹುದು ಎಂಬುದಕ್ಕೆ ಮತ್ತೊಂದು ನಿದರ್ಶನವೇ ಪಂಚಾಕ್ಷಿರಿ ಸಾಲಿಮಠ ಅವರ ದುರಂತ ಅಂತ್ಯ. ಮೊನ್ನೆಯಷ್ಟೇ ಧಾರವಾಡದಲ್ಲೇ ಕರ್ತವ್ಯ ನಿರ್ವಹಿಸಿ ಸಾಕಷ್ಟು ಹೆಸರು ಮಾಡಿದ್ದ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ದುರಂತ ಅಂತ್ಯವಾದರೆ, ಇದೀಗ ಧಾರವಾಡದಲ್ಲೇ ಕರ್ತವ್ಯ ನಿರ್ವಹಿಸಿ ಹೋಗಿದ್ದ ಇನ್‌ಸ್ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಅವರ ಮತ್ತೊಂದು ದುರಂತ ಅಂತ್ಯವಾಗಿದೆ.

ನಿನ್ನೆ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ದುರಂತ ಅಂತ್ಯ ಕಂಡ ಹಾವೇರಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ಆಗಿದ್ದ ಪಂಚಾಕ್ಷರಿ ಸಾಲಿಮಠ ಅವರ ಪಾರ್ಥೀವ ಶರೀರವನ್ನು ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ತರಲಾಗಿತ್ತು. ಹುಬ್ಬಳ್ಳಿಯ ಕಿಮ್ಸ್‌ನಿಂದ ಸಾಲಿಮಠ ಅವರ ಪಾರ್ಥೀವ ಶರೀರವನ್ನು ಅವರ ಹುಟ್ಟೂರಾದ ಬೈಲಹೊಂಗಲದ ಮುರಗೋಡಕ್ಕೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಮಾರ್ಗ ಮಧ್ಯೆ ಧಾರವಾಡದ ಉಪನಗರ ಠಾಣೆಗೆ ಪಾರ್ಥೀವ ಶರೀರವನ್ನು ತಂದು ಗೌರವ ನಮನ ಸಲ್ಲಿಸಲಾಯಿತು.
ಪಂಚಾಕ್ಷರಿ ಅವರು ಧಾರವಾಡ ಉಪನಗರ ಠಾಣೆಯಲ್ಲಿ ಕೆಲ ತಿಂಗಳು ಪ್ರಭಾರ ಇನ್‌ಸ್ಪೆಕ್ಟರ್ ಆಗಿ, ಧಾರವಾಡ ಗ್ರಾಮೀಣ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಹೀಗಾಗಿ ಅವರಿಗೂ ಧಾರವಾಡಕ್ಕೂ ಅವಿನಾಭಾವ ಸಂಬಂಧವಿತ್ತು. ಇವತ್ತು ಸಾಕ್ಷಿ ಇದ್ದ ಕಾರಣ ಪಂಚಾಕ್ಷರಿ ಅವರು ನಿನ್ನೆ ತಮ್ಮ ಸ್ವಂತ ಕಾರು ತೆಗೆದುಕೊಂಡು ಗದಗ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ನಂತರ ಕಂದಕಕ್ಕೆ ಉರುಳಿ ಧಗ ಧಗನೇ ಹೊತ್ತಿ ಉರಿದಿತ್ತು. ಕಾರಿನಲ್ಲಿದ್ದ ಪಂಚಾಕ್ಷರಿ ಅವರು ಹೊರಗೆ ಬರಲಾಗದೇ ಅಲ್ಲೇ ಸಜೀವವಾಗಿ ದಹನಗೊಂಡಿದ್ದಾರೆ. ಉಪನಗರ ಠಾಣೆಯಲ್ಲಿ ಕೆಲ ತಿಂಗಳು ಕರ್ತವ್ಯ ನಿರ್ವಹಿಸಿದ್ದ ಪಂಚಾಕ್ಷರಿ ಅವರಿಗೆ ಉಪನಗರ ಠಾಣೆ ಎಲ್ಲ ಸಿಬ್ಬಂದಿ ಭಾವಪೂರ್ಣ ವಿದಾಯ ಸಲ್ಲಿಸಿದರು.

ಈ ಘಟನೆಯಲ್ಲಿ ಪಂಚಾಕ್ಷರಿ ಅವರ ಇಡೀ ದೇಹ ಸುಟ್ಟು ಕರಕಲಾಗಿದೆ. ಅಳಿದುಳಿದ ಶರೀರವನ್ನೇ ಅಂತ್ಯ ಸಂಸ್ಕಾರಕ್ಕೆ ಅವರ ಹುಟ್ಟೂರಿಗೆ ತೆಗೆದುಕೊಂಡು ಹೋಗಲಾಗಿದೆ. ಉಪನಗರ ಠಾಣೆಯಲ್ಲಿ ನಮನ ಸಲ್ಲಿಸಿದ ನಂತರ ಗರಗ ಠಾಣೆಗೂ ತೆಗೆದುಕೊಂಡು ಹೋಗಿ ಅಲ್ಲಿಯೂ ಪಾರ್ಥೀವ ಶರೀರಕ್ಕೆ ನಮನ ಸಲ್ಲಿಸಲಾಯಿತು. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗೆ ಈ ರೀತಿಯ ದುರಂತ ಸಾವು ಬರಬಾರದಿತ್ತು ಎಂದು ಅವರೊಟ್ಟಿಗೆ ಕೆಲಸ ಮಾಡಿದ ಸಿಬ್ಬಂದಿ ಕಂಬನಿ ಮಿಡಿದ ಪ್ರಸಂಗವೂ ನಡೆಯಿತು.


