ಬೆಂಗಳೂರು: ಇಂಡಿಗೋ ವಿಮಾನ ಹಾರಾಟದಲ್ಲಿ 5ನೇ ದಿನವೂ ವ್ಯತ್ಯಯ ಕಂಡುಬಂದಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ ಹೇಳತೀರದಾಗಿದೆ. ನೂರಾರು ಸಂಖ್ಯೆಯಲ್ಲಿ ಪ್ರಯಾಣಿರರು ವಿಮಾನ ನಿಲ್ದಾಣದಲ್ಲೇ ಸಮತ ಕಳೆಯುವಂತಾಗಿದೆ. ಈ ಕುರಿತು ಪ್ರಯಾಣಿಕರು ಮಾಧ್ಯಮಗಳ ಜೊತೆಗೆ ಮಾತನಾಡಿ ಇಂಡಿಗೋ ವಿಮಾನಯಾನ ಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ವಿಮಾನ ನಿಲ್ದಾಣದ ಸಿಬ್ಬಂದಿ ತಮಗೆ ಸರಿಯಾದ ಮಾಹಿತಿ ನಿಡುತ್ತಿಲ್ಲ. ಕೊನೆಯ ಕ್ಷಣದಲ್ಲಿ ವಿಮಾನ ಹಾರಾಟ ರದ್ದಾಗಿದೆ ಅಂತಾ ಹೇಳುತ್ತಿದ್ದು, ಮುಂದಿನ ಎರಡು ದಿನಗಳಲ್ಲಿ ನಿಮ್ಮ ಹಣ ಮರುಪಾವತಿ ಆಗುತ್ತೆ ಅಂತಾ ಹೇಳ್ತಿದಾರೆ. ನಮಗೆ ಹಣ ಮುಖ್ಯವಲ್ಲ, ಕೆಲವರು ಬಿಸಿನೆಸ್ ಗೋಸ್ಕರ ಹೋಗ್ತಾರೆ, ಇನ್ನೂ ಕೆಲವರು ವೈಯಕ್ತಿಕ ಕೆಲಸದ ನಿಮಿತ್ತ ಬೇರೆ ಬೇರೆ ಕಡೆ ಹೋಗಬೇಕಾಗಿರುತ್ತೆ. ಇಂದು ನೋಡಿದರೆ ಯಾವುದೇ ಪೂರ್ವ ಮಾಹಿತಿಯಿಲ್ಲದೇ ಕೆಲವು ವಿಮಾನಗಳು ತಡವಾಗುತ್ತಿವೆ. ಇನ್ನೂ ಕೆಲವು ಸಂಪೂರ್ಣ ಕ್ಯಾನ್ಸಲ್ ಆಗುತ್ತಿವೆ. ಕುಟುಂಬ ಸಮೇತ ಜೈಪುರಕ್ಕೆ ಹೋಗಬೇಕಿತ್ತು. ಆದರೆ ಇನ್ನೂ ಕೂಡ ವಿಮಾನ ಕನ್ಪರ್ಮ್ ಮಾಡುತ್ತಿಲ್ಲ. ನಾವುಗಳು ಬಳ್ಳಾರಿಯಿಂದ ಬಂದಿದ್ದೇವೆ. ಈಗ ಏನು ಮಾಡಬೇಕು ಗೊತ್ತಿಲ್ಲ ಅಂತ ಗೋಳಾಡುತ್ತಿದ್ದಾರೆ.
ಇನ್ನು ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಸಿಬ್ಬಂದಿ ಕೊರತೆಯಿಂದ ಈ ಅವಾಂತರ ಸೃಷ್ಠಿಯಾದೆ ಎನ್ನಲಾಗುತ್ತಿದ್ದು, ಪ್ರಯಾಣಿಕರನ್ನು ಕಂಗೆಡಿಸಿದೆ. ಕಳೆದ ನಾಲ್ಕು ದಿನಗಳಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆಯ ಒಂದು ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದ್ದು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಪರದಾಡುತ್ತಿರುವುದು ನೋಡತೀರದಾಗಿದೆ. ಮೊದ ಮೊದಲು ಸಣ್ಣ ಸಮಸ್ಯೆಯಂತೆ ಕಂಡ ಇದು ಒಂದೆರಡು ದಿನಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಂಡಿಗೋ ವಿಮಾನಗಳಿದ್ದರೂ ಅವುಗಳನ್ನು ನಡೆಸಲು ಸಿಬ್ಬಂದಿಗಳಿಲ್ಲದ ಪರಿಸ್ಥಿತಿ ಇಂಡಿಗೋ ವಿಮಾನಯಾನ ಸಂಸ್ಥೆಗೆ ಬಂದೊದಗಿದೆ.

ಇದೇ ಪ್ರಮುಖ ಕಾರಣದಿಂದ ದೆಹಲಿ, ಬೆಂಗಳೂರು, ಲಕ್ನೋ, ಜಮ್ಮು ಕಾಶ್ಮೀರ, ಚೆನ್ನೈ, ಹೈದರಾಬಾದ್, ಭೂಪಾಲ್ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಂಪೂರ್ಣವಾಗಿ ತನ್ನ ಹಾರಾಟ ನಿಲ್ಲಿಸಿರುವುದಾಗಿ ಇಂಡಿಗೋ ವಿಮಾನಯಾನ ಸಂಸ್ಥೆ ಘೋಷಣೆ ಮಾಡಿದೆ. ಇನ್ನು ಮುಂಗಡ ಬುಕ್ ಮಾಡಿರುವ ವಿಮಾನಗಳು ಹತ್ತಾರು ಗಂಟೆಗಳ ನಂತರ ರದ್ದಾದ ಹಿನ್ನಲೆ ಪ್ರಯಾಣಿಕರು ವಿಮಾನ ನಿಲ್ದಾಣದ ಹೊರಗೆ ಮತ್ತು ಒಳಗೆ ಪ್ರತಿಭಟನೆ ನಡೆಸಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇಂಡಿಗೋ ವಿಮಾನಯಾನ ಸಂಸ್ಥೆ ತನ್ನ ವಿಮಾನಗಳ ಹಾರಾಟ ರದ್ದು ಮಾಡಿದ್ದನ್ನೇ ಲಾಭ ಮಾಡಿಕೊಂಡಿರುವ ಇತರೆ ವಿಮಾನಯಾನ ಸಂಸ್ಥೆಗಳು ವಿಮಾನ ದರ ನಿಯಮಗಳನ್ನು ಉಲ್ಲಂಘಿಸಿ ಟಿಕೆಟ್‌ಗಳ ಮೇಲೆ ಹತ್ತಕ್ಕಿಂತ ಹೆಚ್ಚು ಪಟ್ಟು ಬೆಲೆಯನ್ನು ಏರಿಕೆ ಮಾಡಿವೆ. 5 ರಿಂದ 8 ಸಾವಿರ ರೂಪಾಯಿಗೆ ಸಿಗಬೇಕಿದ್ದ ಎಕಾನಮಿ ಟಿಕೆಟ್‌ಗಳು 50 ರಿಂದ 80 ಸಾವಿರ ರೂಪಾಯಿವರೆಗೂ ಏರಿಕೆಯಾಗಿದೆ. ಈ ಬಗ್ಗೆ ವಿರೋಧ ಪಕ್ಷಗಳು ಸಂಸತ್‌ನಲ್ಲಿ ಧ್ವನಿ ಎತ್ತುತ್ತಿದ್ದಂತೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿದೆ.


