ಬೆಳಗಾವಿ: ಬೆಳಗಾವಿಯ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣ ಮೃಗಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಡೆಗೂ ಕೃಷ್ಣ ಮೃಗಗಳ ಸಾವಿನ ರಹಸ್ಯ ಬಹಿರಂಗವಾಗಿದೆ.

ಕೃಷ್ಣ ಮೃಗಗಳ ಮರಣೋತ್ತರ ಪರೀಕ್ಷೆಯ ಲ್ಯಾಬ್ ವರದಿ ಬಂದಿದೆ. ದಕ್ಷಿಣ ಪ್ರಾದೇಶಿಕ ರೋಗಪತ್ತೆ ಪ್ರಯೋಗಾಲಯ ಪ್ರಾಣಿ ಆರೋಗ್ಯ ಮತ್ತು ಪಶುವೈದ್ಯಕೀಯ ಜೀವಶಾಸ್ತ್ರ ರೋಗ ಪತ್ತೆ ಬ್ಯಾಕ್ಟೀರಿಯಾಲಜಿ ಮತ್ತು ಮೈಕಾಲಜಿ ಬೆಂಗಳೂರು ಈ ವರದಿ ನೀಡಿದ್ದು, ಹಿಮೋರಿಜಿಕ್ ಸೆಪ್ಟಿಸೀಮಿಯಾ ಬ್ಯಾಕ್ಟೀರಿಯಾದಿಂದ ಮತ್ತು ಗಳಲೆ ರೋಗದಿಂದ ಮೃತಪಟ್ಟ ಬಗ್ಗೆ ವರದಿ ಬಂದಿದೆ
ಈ ಕುರಿತು ಸುದ್ಧಿಗೋಷ್ಠಿ ನಡೆಸಿದ ಬೆಳಗಾವಿ ಡಿಎಫ್‌ಒ ಕ್ರಾಂತಿ, ಏಳು ಜೀವಂತ ಇರುವ ಕೃಷ್ಣ ಮೃಗಗಳು ಆರೋಗ್ಯವಾಗಿವೆ. ಕೆಲ ದಿನಗಳ ವರೆಗೂ ಎಲ್ಲವನ್ನ ನಿಗಾದಲ್ಲಿ ಇಡಲಾಗುತ್ತದೆ. ಈ ಕಾಯಿಲೆ ಹೊರಗಿನಿಂದ ಬರಬೇಕು ಇಲ್ಲವಾದಲ್ಲಿ ಆ ಪ್ರಾಣಿಯಲ್ಲಿ ಬ್ಯಾಕ್ಟೀರಿಯಾ ಇರುತ್ತೆ. ಆಗ ವಾತಾವರಣದಲ್ಲಿ ಏರುಪೇರು ಆದಾಗ ಒಳಗೆ ಇದ್ದ ಬ್ಯಾಕ್ಟೀರಿಯಾದಿಂದ ಕಾಯಿಲೆ ಬರುತ್ತೆ. ಗಾಳಿಯಿಂದಲೂ ಈ ಕಾಯಿಲೆ ಬರುವ ಸಾಧ್ಯತೆ ಇರುತ್ತೆ. ಮುಖ್ಯವಾಗಿ ಸಸ್ಯಹಾರಿ ಪ್ರಾಣಿಗಳಿಗೆ ಬರುವ ಕಾಯಿಲೆ ಇದಾಗಿದೆ ಎಂದಿದ್ದಾರೆ.

ಈಗಾಗಲೇ ಮೃಗಾಲಯದಲ್ಲಿ ಬೇರೆ ಪ್ರಾಣಿಗಳಿಂದ ಇವುಗಳನ್ನು ಅಂತರ ಕಾಯ್ದುಕೊಳ್ಳಲಾಗಿದೆ. ಎಲ್ಲ ಪ್ರಾಣಿಗಳನ್ನ ನಿಗಾದಲ್ಲಿ ಇಡಲಾಗಿದ್ದು, ಎಲ್ಲದಕ್ಕೂ ರೋಗ ನಿರೋಧಕ ಔಷಧಿ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಸಾಕು ಪ್ರಾಣಿಗಳಿಗೆ ಹರಡುವ ಸಾಧ್ಯತೆ ಇರುವ ಕಾರಣ. ಪಶು ಸಂಗೋಪನೆ ಇಲಾಖೆಗೆ ತಿಳಿಸಿದ್ದು ಮುಂಜಾಗ್ರತಾ ಕ್ರಮಗಳನ್ನ ವಹಿಸಲಾಗುವುದು ಎಂದರು.
38 ಕೃಷ್ಣ ಮೃಗಗಳ ಪೈಕಿ 31 ಕೃಷ್ಣ ಮೃಗಗಳು ಸಾವನ್ನಪ್ಪಿದ್ದವು. ಏಕಾಏಕಿ ನಿಗೂಢವಾಗಿ ಕೃಷ್ಣ ಮೃಗಗಳು ಮೃಗಾಲಯದಲ್ಲಿ ಸಾವನ್ನಪ್ಪಿದ್ದವು. ಬೆಂಗಳೂರಿನಿಂದ ವೈದ್ಯರ ತಂಡ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಮರಣೋತ್ತರ ಪರೀಕ್ಷೆಯ ವರದಿ ಇಂದು ಬಂದಿದ್ದು, ನ.13ರಿಂದ ನಿರಂತರವಾಗಿ ಕೃಷ್ಣ ಮೃಗಗಳ ಸಾವಾಗಿತ್ತು.
ಬ್ಯಾಕ್ಟೀರಿಯಾ ಇನ್ಫೆಕ್ಷನ್ ದಿಂದ ಸಾವಾಗಿರುವ ಸಂಶಯ ವ್ಯಕ್ತಪಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಹಿಮೋರಿಜನ್ ಸೆಪ್ಟಿಸೀಮಿಯಾ ಬ್ಯಾಕ್ಟೀರಿಯಾದಿಂದ ಸಾವಾಗಿರುವ ಶಂಕೆ ಇತ್ತು. ಗುಜರಾತ್ ನ ವಡೋದರದಲ್ಲಿ ಈ ರೋಗ ಪತ್ತೆಯಾಗಿತ್ತು. ಅಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯರ ವಿಡಿಯೋ ಕಾನ್ಫರೆನ್ಸ್ ಮೂಲಕ ಚಿಕಿತ್ಸೆ ಬಗ್ಗೆ ಚರ್ಚೆ ಮಾಡಲಾಗಿತ್ತು ಎಂದು ಡಿಎಫ್ಓ ಕ್ರಾಂತಿ ತಿಳಿಸಿದ್ದಾರೆ.


