ದೆಹಲಿಯಲ್ಲಿ ಆಕ್ಟೀವ್ ಆದ ರೆಬೆಲ್ ಟಿಂ: ಬದಲಾಗುತ್ತಾ ವಿಜಯೇಂದ್ರ ರಾಜ್ಯಾಧ್ಯಕ್ಷ ಪಟ್ಟ.!?

Letest Post ರಾಜ್ಯ

ದೆಹಲಿ: ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ರಾಜಕೀಯ ಚದುರಂಗದಾಟ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿತಾ ಅನ್ನೋ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಸದ್ದಿಲ್ಲದೇ ಗದ್ದಲವೇಬಿಸಿದೆ. ಕಾಂಗ್ರೆಸ್‌ನಲ್ಲಿ ಸಿಎಂ ಖುರ್ಚಿ ಕದನ ಮುನ್ನೆಲೆಯಲ್ಲಿರುವಾಗಲೇ ರಾಜ್ಯ ಬಿಜೆಪಿಯಲ್ಲೂ ರೆಬೆಲ್ಸ್ ನಾಯಕರ ಟೀಮ್ ಮತ್ತೆ ಸಕ್ರಿಯವಾಗಿದೆ.

ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಕುಮಾರ್ ಬಂಗಾರಪ್ಪ, ಶ್ರೀಮಂತ್ ಪಾಟೀಲ್, ಬಿ.ವಿ. ನಾಯಕ್, ಬಿ.ಪಿ. ಹರೀಶ್, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತು ಎನ್.ಆರ್. ಸಂತೋಷ್ ಸೇರಿದಂತೆ ಹಲವು ನಾಯಕರು ದೆಹಲಿಗೆ ತೆರಳಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ.

ಈ ರೆಬೆಲ್ ನಾಯಕರು ರಾಜ್ಯ ಬಿಜೆಪಿಯ ಪ್ರಸ್ತುತ ವಿದ್ಯಮಾನಗಳ ಕುರಿತು ಚರ್ಚೆ ನಡೆಸಲು ಮುಂದಾಗಿದ್ದು, ಇಷ್ಟು ದಿನ ಸೈಲೆಂಟ್ ಆಗಿದ್ದ ರೆಬೆಲ್ ನಾಯಕರ ತಂಡ ಇದೀಗ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಮತ್ತೆ ತಮ್ಮ ಅಸಮಾಧಾನವನ್ನು ಹೈಕಮಾಂಡ್ ಮುಂದೆ ಹೊರಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಬಿಜೆಪಿ ರೆಬೆಲ್ ನಾಯಕರ ದೆಹಲಿ ಭೇಟಿಗೆ, ಬಿಜೆಪಿ ಹಿರಿಯ ನಾಯಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಇದ್ದಕ್ಕಿದ್ದಂತೆ ಬಂಡಾಯಕ್ಕೆ ಕಾರಣವೇನು ಎಂದು ಪ್ರಶ್ನೆ ಮಾಡಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಈ ಮಧ್ಯೆ ಬಿಜೆಪಿ ಹೈಕಮಾಂಡ್ ಗೆ ಹತ್ತಿರ ಇರುವ ನಾಯಕರೊಬ್ವರು ಈ ಕುರಿತು ತುಟಿ ಬಿಚ್ಚಿದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷರನ್ನಾಗಿ ಮುಂದುವರಿಸಬಹುದು. ಹೀಗಾಗಿ, ಅದಾಗದಂತೆ ತಡೆಯಲು ಮನವಿಗಾಗಿ ದೆಹಲಿಗೆ ಬಂದಿರಬಹುದು ಎಂದು ತಿಳಿಸಿದ್ದಾರೆ. ಈ ಕುರಿತ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಲು ವಿಜಯೇಂದ್ರ ನಿರಾಕರಿಸಿದ್ದಾರೆ. ಬಂಡಾಯದಿಂದ ಈಗಾಗಲೇ ಕೆಲ ನಾಯಕರು ಭಾರೀ ಬೆಲೆ ತೆತ್ತಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಹೊರ ಹಾಕಲಾಗಿದೆ. ಈ ಮೂಲಕ ಭಿನ್ನಮತ ಸಹಿಸುವುದಿಲ್ಲ ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡ್ ಈಗಾಗಲೇ ರವಾನಿಸಿದೆ.

ಇನ್ನು ಬೇರೆ ಪಕ್ಷಗಳಿಂದ ಬಿಜೆಪಿಗೆ ಬಂದ ಕೆಲ ನಾಯಕರೇ ಪಕ್ಷದ ವಿರುದ್ಧ ಹೆಚ್ಚು ಬಂಡಾಯ ಎದ್ದಿದ್ದಾರೆ. ರಮೇಶ್ ಜಾರಕಿಹೊಳಿ ಮತ್ತು ಕುಮಾರ್ ಬಂಗಾರಪ್ಪ ಇಬ್ಬರೂ ಕಾಂಗ್ರೆಸ್‌ನಿಂದ ಬಂದವರಾಗಿದ್ದಾರೆ. ದೆಹಲಿಯಲ್ಲಿ ಬಂಡಾಯ ನಾಯಕರು ಒಟ್ಟುಗೂಡಿದ್ದು, ಕೇಂದ್ರ ನಾಯಕರು ಅವರ ಅಸಮಾಧಾನವನ್ನು ಆಲಿಸುತ್ತಾರೋ ಅಥವಾ ವಿಜಯೇಂದ್ರ ಅವರಿಗೆ ಬಹುಪರಾಕ್ ಎನ್ನುತ್ತಾರೋ ಎಂಬ ಕುತೂಹಲಗಳು ಕಾಡತೊಡಗಿವೆ. ಇದೆಲ್ಲದರ ಮಧ್ಯೆ ಬಿಜೆಪಿ ಹೈಕಮಾಂಡ್ ವಿಜಯೇಂದ್ರ ಅವರನ್ನು ಮುಂದುವರೆಸಿದ್ದೇ ಆದರೆ, ಇದು ಮುಂಬರುವ ದಿನಗಳಲ್ಲಿ ಹೆಚ್ಚಿನ ಪಕ್ಷಾಂತರಗಳಿಗೆ ಕಾರಣವಾಗಬಹುದು ಅನ್ನೋದು ರಾಜಕೀಯ ವಿಶ್ಲೇಷಕರ ಮಾತಾಗಿದೆ.

Leave a Reply

Your email address will not be published. Required fields are marked *