ಒಂದೂವರೆ ವರ್ಷಗಳಿಂದ ಮಾಹಿತಿ ರವಾನಿಸಿ ಹಣ ಗಳಿಸುತ್ತಿದ್ದ ಖದೀಮರು!
ಉಡುಪಿ: ಮಲ್ಪೆಯ ಕೊಚ್ಚಿನ್ ಶಿಪ್ಯಾರ್ಡ್ ಕಂಪೆನಿಯಲ್ಲಿ ನೌಕರಿ ಮಾಡುತ್ತಿದ್ದ ಇಬ್ಬರು ಪಾಕಿಸ್ಥಾನಕ್ಕೆ ಗೌಪ್ಯ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ರೋಹಿತ್ (29) ಮತ್ತು ಸಂತ್ರಿ (37) ಬಂಧಿತರು. ಏನಿದರ ಹಿನ್ನೆಲೆ? ಯಾಕಾಗಿ ಈ ಕೆಲಸ ಮಾಡ್ತಾ ಇದ್ರು? ಈ ಸ್ಟೋರಿ ಓದಿ.
ಮಲ್ಪೆಯ ಕೊಚ್ಚಿನ್ ಶಿಪ್ಯಾರ್ಡ್ ಕಂಪೆನಿ ಕೇಂದ್ರ ಸರ್ಕಾರ ಸ್ವಾಮ್ಯದ ಬಂದರು ಹಡಗು ಮತ್ತು ಜಲಸಾರಿಗೆ ಇಲಾಖೆಯ ಅಧೀನದಲ್ಲಿದೆ. ಈ ಸಂಸ್ಥೆಯಿಂದ M/S Shushma Marine Private Limited ಎಂಬ ಸಂಸ್ಥೆಯು ಸಬ್‌ಕಂಟ್ರಾಕ್ಟ್ ಹೊಂದಿದ್ದು, ಈ ಸಂಸ್ಥೆಯಲ್ಲಿ ಉತ್ತರಪ್ರದೇಶದ ರೋಹಿತ್ ಎಂಬಾತ ಇನ್ಸುಲೇಟರ್ ಆಗಿ ಕೆಲಸ ಮಾಡಿಕೊಂಡಿದ್ದ. ಈತ ಈ ಹಿಂದೆ ಕೇರಳ ರಾಜ್ಯದ ಕೊಚ್ಚಿಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಕೇರಳದ ಕೊಚ್ಚಿನ್ ಶಿಪ್‌ಯಾರ್ಡ್ ನಲ್ಲಿ ಭಾರತದ ನೌಕಾ ಸೇನೆಗೆ ಸಂಬಂಧಪಟ್ಟ ಹಡಗುಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರೋಹಿತ್, ಕೇರಳದಲ್ಲಿ ಕೆಲಸ ಮಾಡುವಾಗಲೇ ಭಾರತದ ನೌಕಾ ಸೇನೆಗೆ ಸಂಬಂಧಪಟ್ಟ ಹಡಗುಗಳ ನಂಬರ್ ಗಳ ಗೌಪ್ಯ ಪಟ್ಟಿ, ಇತರ ಗೌಪ್ಯ ಮಾಹಿತಿಯನ್ನು ವಾಟ್ಸಪ್ ಮೂಲಕ ಅನಧಿಕೃತವಾಗಿ ಶೇರ್ ಮಾಡಿ, ಅಕ್ರಮ ಲಾಭ ಪಡೆದಿದ್ದಾನೆ ಎಂಬ ಕಹಿಸತ್ಯ ಇದೀಗ ಬಯಲಾಗಿದೆ.

ನಂತರ ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ಗೆ ವರ್ಗಾವಣೆ ಆದ ನಂತರವೂ ಆತನ ಹಳೆ ಚಾಳಿ ತೋರಿಸಿದ್ದ. ಕೊಚ್ಚಿಯಲ್ಲಿರುವ ಆತನ ಸ್ನೇಹಿತನಿಂದ ಮಾಹಿತಿ ಪಡೆದು, ಪುನಃ ವಾಟ್ಸಪ್ ಮೂಲಕ ಪಾಕಿಸ್ತಾನದ ಅನಧಿಕೃತ ವ್ಯಕ್ತಿಗೆ ಶೇರ್ ಮಾಡಿ, ಭಾರತದ ಸಾರ್ವಭೌಮತೆ, ಏಕತೆ ಮತ್ತು ಅಖಂಡತೆಗೆ ಧಕ್ಕೆ ತಂದಿದ್ದಾನೆ. ಆಂತರಿಕ ಭಧ್ರತೆಗೂ ಧಕ್ಕೆ ತರುವ ಕೆಲಸ ಮಾಡಿದ್ದಾನೆ. ಈ ಬಗ್ಗೆ ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಮಲ್ಪೆಯ ಸಿಇಓ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕ್ರೈಂ ಸಂಖ್ಯೆ: 128/2025, ಕಲಂ:152 BNS, ಕಲಂ:3, 5 OFFICIAL SECRETS ACT, 1923 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳಾದ ರೋಹಿತ್ (29) ಮತ್ತು ಸಂತ್ರಿ (37) ಎಂಬ ಇಬ್ಬರು ದೇಶದ್ರೋಹಿಗಳನ್ನು ಬಂಧಿಸಿದ್ದಾರೆ. ಇಬ್ಬರೂ ಆರೋಪಿಗಳು ಉತ್ತರ ಪ್ರದೇಶ ಮೂಲದವರಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ 03/12/2025 ರವರೆಗೆ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದೆ ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ. ಆರೋಪಿಗಳು ಈ ಕೆಲಸಕ್ಕಾಗಿ ಎಷ್ಟು ಹಣ ಪಡೆದುಕೊಂಡಿದ್ದಾರೆ? ಇವರ ಹಿಂದೆ ಬೇರೆಯವರೂ ಇದ್ದಾರಾ? ಒಂದೂವರೆ ವರ್ಷ ಯಾಕೆ ಇದು ಬೆಳಕಿಗೆ ಬಂದಿಲ್ಲ ಎಂಬಿತ್ಯಾದಿ ಸಂಗತಿಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


