ಬೆಳಗಾವಿ: ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಈ ಸಂದರ್ಭದಲ್ಲಿ ಗಡಿ ಭಾಗದ ವಿವಿಧ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗಡಿ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಅವರೊಂದಿಗೆ ಚರ್ಚಿಸಲು ರವಿವಾರ ಸಂಜೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ಸೇರಿದ್ದ ವಿವಿಧ ಕನ್ನಡಪರ ಸಂಘಟನೆಗಳು ತೀರ್ಮಾನ ಮಾಡಿದವು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಮತ್ತು ಗಡಿ ಸಂರಕ್ಷಣಾ ಆಯೋಗದ ಪ್ರಾದೇಶಿಕ ಕಚೇರಿ ಸ್ಥಾಪನೆ, ರಾಜ್ಯ ಸರಕಾರದ ಏಳು ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಿಸಲಾದ ಕನ್ನಡ ಭವನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕಕ್ಕೆ ಮರಳಿ ಕೊಡಿಸುವುದು, ಕನ್ನಡ ಭವನವನ್ನು ಅಕ್ರಮವಾಗಿ ಹಿಡಿತದಲ್ಲಿಟ್ಟುಕೊಂಡಿರುವ ಖಾಸಗಿ ಸಂಘದ ಕುರಿತು ತನಿಖೆ ನಡೆಸಲು ಮುಖ್ಯಮಂತ್ರಿ ಹಾಗೂ ಗಡಿ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸುವ ಕುರಿತು ಮತ್ತು ಜಿಲ್ಲಾಧಿಕಾರಿಗಳು ಕನ್ನಡ ಭವನದ ಸಂಬಂಧ ಕೈಕೊಂಡ ಆದೇಶಕ್ಕೆ ಹೈಕೋರ್ಟ್ ನೀಡಿದ ತಡೆಯಾಜ್ಞೆಯನ್ನು ತೆರವುಗೊಳಿಸುವ ಕುರಿತು ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು.
ಬೆಳಗಾವಿ ನಗರದಲ್ಲಿ ಅಳವಡಿಲಾಗಿರುವ ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಬಳಕೆ, ಸುವರ್ಣ ವಿಧಾನಸೌಧದ ಎದುರು ತಾಯಿ ಭುವನೇಶ್ವರಿಯ ಪ್ರತಿಮೆ ಸ್ಥಾಪನೆಯ ವಿಷಯಗಳು ಸಹ ಸಭೆಯಲ್ಲಿ ಚರ್ಚೆಗೆ ಬಂದವು. ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಧ್ಯಕ್ಷ ಮಹಾದೇವ ತಳವಾರ, ಕರ್ನಾಟಕ ರಕ್ಷಣಾ ವೇದಿಕೆ ( ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ವಾಜಿದ ಹಿರೇಕೋಡಿ, ಸರ್ವೋದಯ ಸ್ವಯಂ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳೂಕರ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಧಕ್ಷ ಬಲರಾಮ ಮಾಸೇನಟ್ಟಿ, ರಾಜು ಕೋಲಾ, ಆನಂದ ಬಿಲಾವರ, ಸಂತೋಷ ಮಾಸೇನಟ್ಟಿ ಸೇರಿದಂತೆ 50 ಕ್ಕೂ ಅಧಿಕ ಕನ್ನಡಪರ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.


