ಕಲಬುರಗಿ: ಭೀಕರ ರಸ್ತೆ ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ ಬಿಳಗಿ ದುರ್ಮರಣಕ್ಕಿಡಾಗಿದ್ದಾರೆ. ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಜೇವರ್ಗಿಯ ಗೌನಹಳ್ಳಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಸೇರಿದಂತೆ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯವರಾದ 2012 ಬ್ಯಾಚಿನ ಅಧಿಕಾರಿಯಾಗಿದ್ದ ಮಹಾಂತೇಶ ಬಿಳಗಿ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ವಿಜಯಪುರದಿಂದ ಸಂಬಂಧಿಕರ ಮದುವೆಗೆ ತೆರಳುತ್ತಿದ್ದ ವೇಳೆ ಇವರು ಪ್ರಯಾಣಿಸುತ್ತಿದ್ದ ಇನ್ನೊವಾ ಕಾರು ಅಪಘಾತವಾಗಿದೆ.

ಮೂಲಗಳ ಪ್ರಕಾರ ಮಹಾಂತೇಶ ಬಿಳಗಿ ಅವರೊಂದಿಗೆ ಅವರ ಸಹೋದರ ಮತ್ತು ಇನ್ನೊಬ್ಬ ವ್ಯಕ್ತಿ ಇದ್ದರು ಎನ್ನಲಾಗಿದೆ. ಇವರ ಇನ್ನೊವಾ ಕಾರಿಗೆ ಅಡ್ಡಲಾಗಿ ನಾಯಿ ಓಡಿಬಂದಿದೆ ಎನ್ನಲಾಗಿದ್ದು, ನಾಯಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಈ ಭೀಕರ ಅಪಘಾತ ನಡೆದಿದೆ ಎನ್ನಲಾಗಿದೆ. ಇನ್ನು ಅಪಘಾತದಲ್ಲಿ ಮಹಾಂತೇಶ್ ಬಿಳಗಿ, ಅವರ ಸಹೋದರ ಶಂಕರ್ ಬಿಳಗಿ ಮತ್ತು ಈರಣ್ಣ ಶಿರಸಂಗಿ ಸಾವಿಗೀಡಾಗಿದ್ದಾರೆ. ಶಂಕರ್ ಮತ್ತು ಈರಣ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮಹಾಂತೇಶ್ ಬಿಳಗಿ ಅವರನ್ನು ತಕ್ಷಣ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಮೃತ ಮಹಾಂತೇಶ ಬಿಳಗಿ ಅವರ ರಾಮದುರ್ಗದ ಮನೆಯಲ್ಲಿ ನೀರವ ಮೌನ:

ಇನ್ನು ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಹುಟ್ಟುರು ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಟ ನಲ್ಲಿರುವ ಮನೆಯಲ್ಲಿ ನಿರವಮೌನ ಆವರಿಸಿದೆ. ಸಾವಿನ ಸುದ್ದಿ ತಿಳಿದು ಸಂಬಂಧಿಕರು, ಸ್ನೇಹಿತರು, ಸ್ಥಳಿಯರು ಅವರ ಮನೆಯತ್ತ ಧಾವಿಸುತ್ತಿದ್ದಾರೆ. ಮಹಾಂತೇಶ್ ಬೀಳಿಗಿಗೆ ಕಲಿಸಿದ ಗುರುಗಳು, ಸ್ನೇಹಿತರು ಮಹಾಂತೇಶ್ ಬೀಳಗಿ ನೆನೆದು ಭಾವುಕರಾಗಿದ್ದಾರೆ. ಎರಡು ಹೊತ್ತು ಊಟ ಮಾಡದಷ್ಟು ಕಡು ಬಡತನದಲ್ಲಿ ಬೆಳೆದಿದ್ದ ಮಹಾಂತೇಶ್ ಡಿಗ್ರಿ ವರೆಗೂ ರಾಮದುರ್ಗದಲ್ಲಿ ಓದಿ, ಬಳಿಕ ಕರ್ನಾಟಕ ಯುನಿವರ್ಸಿಟಿ ಧಾರವಾಡದಲ್ಲಿ ಓದುತ್ತ ತಂದೆ ಮೃತಪಟ್ಟ ಬಳಿಕ ತಾಯಿ, ನಾಲ್ಕು ಜನ ಮಕ್ಕಳನ್ನ ಸಾಕಿದ್ದರು. ಕಷ್ಟ ಪಟ್ಟು ಓದಿ ಕೆಎಎಸ್ ನಲ್ಲಿ ನಾಲ್ಕನೇ ರ‌್ಯಾಂಕ್ ಪಡೆದಿದ್ದರು ಎಂದು ಸ್ನೇಹಿತರು ಹೇಳುತ್ತಾ ಭಾವುಕರಾದರು.


