ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಇಂದು ಡಿಸಿಎಂ ಡಿ.ಕೆ.ಶಿವಕುಮಾರ ತೆರಳಿ ಬ್ರೇಕ್ ಫಾಸ್ಟ್ ಮೀಂಟಿಂಗ್ ನಲ್ಲಿ ಭಾಗವಹಿಸಿದರು. ಇದೇ ವೇಳೆ ಕಾವೇರಿ ನಿವಾಸಕ್ಕೆ ಆಗಮಿಸಿದ ಡಿಸಿಎಂ ಅವರನ್ನು ಸಿಎಂ ಸಿದ್ದರಾಮಯ್ಯ ಬರಮಾಡಿಕೊಂಡರು. ಸಿಎಂ ನಿವಾಸದಲ್ಲೇ ಉಭಯ ನಾಯಕರು ಉಪಹಾರ ಮಾಡುತ್ತ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ಮಹತ್ವದ ಚರ್ಚೆ ನಡೆಸಿದರು.

ಬ್ರೇಕ್ ಫಾಸ್ಟ್ ಮುಗಿಸಿ ಉಭಯ ನಾಯಕರು ನಗುನಗುತ್ತಲೇ ಹೊರಬಂದು ಜಂಟಿ ಸುದ್ದಿಗೋಷ್ಠಿ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿದರು. ನಾನು, ಡಿ.ಕೆ.ಶಿವಕುಮಾರ್ ಹಾಗೂ ಪೊನ್ನಣ್ಣ ಬ್ರೇಕ್ ಫಾಸ್ಟ್ ಮಾಡಿದ್ದೇವೆ. ಚೆನ್ನಾಗಿತ್ತು. ಡಿ.ಕೆ.ಶಿವಕುಮಾರ ಇಂದು ನಮ್ಮ ಮನೆಗೆ ಬಂದಿದ್ದರು. ಹೈಕಮಾಂಡ್ ನನಗೆ ಫೋನ್ ಮಾಡಿ ಡಿ.ಕೆ.ಶಿವಕುಮಾರ ಅವರನ್ನು ಕರೆಯಿರಿ ಎಂದಿದ್ದರು. ಡಿ.ಕೆ.ಶಿವಕುಮಾರ್ ಗೂ ಹೇಳಿದ್ದರು. ಅವರು ನನ್ನನ್ನು ಅವರ ಮನೆಗೆ ಊಟಕ್ಕೆ ಬನ್ನಿ ಅಂತ ಕರೆದಿದ್ದರು. ನಾನು ನಮ್ಮನಗೇ ಬನ್ನಿ ಎಂದೆ. ಇಲ್ಲಿಗೆ ಬಂದಿದ್ದಾರೆ ಎಂದು ಇದೆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಇತ್ತಿಚಿಗೆ ಹಲವು ಗೊಂದಲಗಳು ನಿರ್ಮಾಣವಾಗಿವೆ. ಕೆಲವರು ಅನಗತ್ಯ ಗೊಂದಲ ಸೃಷ್ಟಿ ಮಾಡಿದ್ದಾರೆ. ನಮಗೆ 2028ರ ವಿಧಾನಸಭೆ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಖ್ಯ. ನಾವಿಬ್ಬರೂ 2023ರ ಚುನಾವಣೆಯಲ್ಲಿ ಕೆಲಸ ಮಾಡಿದಂತೆ 2028ರಲ್ಲೂ ಕೆಲಸ ಮಾಡಬೇಕೆಂದು ಚರ್ಚೆ ಮಾಡಿದ್ದೇವೆ. ಅದರಂತೆ 2028ರಲ್ಲಿ ಪುನಃ ನಾವೇ ಅಧಿಕಾರಕ್ಕೆ ಬರುವುದು ಮುಖ್ಯ. ಮುಂದೆಯೂ ಒಟ್ಟಿಗೆ ಹೋಗುತ್ತೇವೆ. ಡಿಸೆಂಬರ್ 8ರಿಂದ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ವಿರೋಧ ಪಕ್ಷದವರನ್ನು ಅದು ಬಿಜೆಪಿಯಾಗಿರಲಿ, ಜೆಡಿಎಸ್ ಆಗಿರಲಿ ಸಮರ್ಥವಾಗಿ ಎದುರಿಸುತ್ತೇವೆ. ಬಿಜೆಪಿಯವರ ಸುಳ್ಳು ಅಪಪ್ರಚಾರಗಳನ್ನು ಸಮರ್ಥವಾಗಿ ಎದುರಿಸುತ್ತೇವೆ. ಅದಕ್ಕೆ ಬೇಕಾದ ತಂತ್ರ ಹೆಣೆದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಾವು 140 ಜನರಿದ್ದೇವೆ. ಅವರು ಇಬ್ಬರೂ ಸೇರಿದರೂ 80 ಆಗಬಹುದು. ಅದಕ್ಕಿಂತ ಜಾಸ್ತಿಯಾಗಲು ಸಾಧ್ಯವಿಲ್ಲ. ಅವರು ಏನೇ ಮಾಡಿದರೂ, ಏನೇ ಸುಳ್ಳು ಆರೋಪ ಮಾಡಿದರೂ ಅದನ್ನು ಸಮರ್ಥವಾಗಿ ಎದುರಿಸಲು ತಯಾರಿದ್ದೇವೆ. ಹೈಕಮಾಂಡ್ ಏನು ಹೇಳುತ್ತಾರೋ ಅದನ್ನು ಇಬ್ಬರೂ ಕೇಳುತ್ತೇವೆ. ಗೊಂದಲಗಳನ್ನು ತಿಳಿ ಮಾಡುವ ಕೆಲಸ ಮಾಡಿ ಎಂದು ಹೈಕಮಾಂಡ್ ನವರು ಹೇಳಿದ್ದಾರೆ. ನಾಳೆಯಿಂದ ಯಾವುದೇ ಗೊಂದಲಗಳು ಇರುವುದಿಲ್ಲ. ಈಗಲೂ ಇಲ್ಲ, ಆದರೆ ಕೆಲವರು ಗೊಂದಲ ಮಾಡುತ್ತಿದ್ದಾರೆ. ಕೆಲವು ಶಾಸಕರು ಸಚಿವ ಸಂಪುಟ ಪುನಾರಚನೆ ಮಾಡುತ್ತೇವೆ ಎಂದು ಸಚಿವರಾಗಲು ಅಪೇಕ್ಷೆಪಟ್ಟು ದೆಹಲಿಗೆ ಹೋಗಿದ್ದರು. ಅಲ್ಲಿಂದ ಬಮನದ ಮೇಲೆ ನನ್ನ ಜೊತೆಗೆ ಮಾತನಾಡಿದ್ದಾರೆ. ಹೈಕಮಾಂಡ್ ಏನು ನಿರ್ದೇಶನ ಕೊಡುತ್ತದೆಯೋ ಆ ರೀತಿ ನಡೆದುಕೊಂಡು ಹೋಗುತ್ತೇವೆ ಎಂದು ಇಬ್ಬರೂ ನಿರ್ಧರಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಂತರ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ, ಜನರ ಆಸೆ ಆಕಾಂಕ್ಷೆಗಳಂತೆ ನಮ್ಮ ಸರಕಾರ ಕೆಲಸ ಮಾಡುತ್ತಿದೆ. ಡಿಸೆಂಬರ್ 8ರಿಂದ ಅಧಿವೇಶನ ಬರುತ್ತಿದೆ. ಅಲ್ಲಿ ಯಾವ ರೀತಿ ನಡೆಸಬೇಕೆಂದು ತಂತ್ರ ಮಾಡಿದ್ದೇವೆ. ಪಕ್ಷದ ವರಿಷ್ಠರು ಹೇಳಿದಂತೆ ಹಿಂದೆಯೂ ಕೆಲಸ ಮಾಡಿದ್ದೇವೆ, ಮುಂದೆಯೂ ಮಾಡಿಕೊಂಡು ಹೋಗಬೇಕೆಂದು ನಿರ್ಧಾರ ಮಾಡಿದ್ದೇವೆ. ಯಾವಾಗಲೂ ಯಾವುದೇ ಗುಂಪುಗಾರಿಕೆಗೆ ಅವಕಾಶ ನೀಡಿಲ್ಲ. ನೀಡುವುದೂ ಇಲ್ಲ ಎಂದ ಡಿಕೆಶಿ ನಮ್ಮದು ಒಂದೇ ಗುಂಪು, ಅದು ಕಾಂಗ್ರೆಸ್ ಗುಂಪು. ಒಟ್ಟಿಗೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. ಪಕ್ಷವನ್ನು ಬಲಪಡಿಸುತೇವೆ. ಮುಂದೆ 2028ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಸಿಎಂ ಹೇಳಿದ ಮಾತಿಗೆ ನಾನೂ ಸಹಮತ ವ್ಯಕ್ತಪಡಿಸುತ್ತೇನೆ ಎನ್ನುವ ಮೂಲಕ ಉಭಯ ನಾಯಕರು ಸಧ್ಯಕ್ಕೆ ಎದ್ದಿರುವ ಕುರ್ಚಿ ಕದನಕ್ಕೆ ವಿರಾಮವಿಟ್ಟಿದ್ದಾರೆ.


