ಬೀದರ್: ಸರ್ಕಾರಿ ಬಸ್ ಡಿಕ್ಕಿ ಹೋಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಔರಾದ ತಾಲೂಕಿನ ಬಲ್ಲೂರ ಗ್ರಾಮದ ಸಮೀಪ ನಡೆದಿದೆ.
ಬೀದರ್-ಔರಾದ್ ಹೆದ್ದಾರಿಯ (161A) ಬಲ್ಲೂರ ಗ್ರಾಮದ ಸಮಿಪ ಈ ಘಟನೆ ನಡೆದಿದ್ದು, ಔರಾದ ಘಟಕದ ಬಸ್ ಸಂಖ್ಯೆ KA 38 F 1264 ಔರಾದ – ಬೀದರ ತಡೆರಹಿತ ಬಸ್ ಇದಾಗಿದ್ದು, ಹಿಂಬದಿಯಿಂದ ವೇಗವಾಗಿ ಬಂದ ಬಸ್ ಮುಂಭಾಗದಲ್ಲಿ ಚಲಿಸುತ್ತಿರುವ ಬೈಕ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರನ ಮೇಲೆ ಏರಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಬಿಟ್ಟಿದಾನೆ.

ಮುಂಭಾಗದ ಬಸ್ ಚಕ್ರ ಬೈಕ್ ಸವಾರನ ಮುಖದ ಮೇಲೆ ಹರಿದ ಹಿನ್ನೆಲೆ ಮುಖ ಸಂಪೂರ್ಣ ನುಜ್ಜು ಗುಜ್ಜಾಗಿದೆ. ಮೃತ ವ್ಯಕ್ತಿ ಬಸವರಾಜ ಕಂಟೆಪ್ಪ (34) ಎಂದು ಗುರುತಿಸಲಾಗಿದ್ದು, ಬಲ್ಲೂರ ಗ್ರಾಮದಿಂದ ಕೌಠಾಗೆ ಹೋಗುವಾಗ ಹಿಂದಿನಿಂದ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಬಸ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಅಪಘಾತದ ಹಿನ್ನೆಲೆಯಲ್ಲಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂತಪುರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಸಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


